Sunday, July 7, 2024
Homeಚುನಾವಣೆ 2023RAJASTHAN ELECTION: ರಾಜಸ್ಥಾನದಲ್ಲಿ ಕಾಂಗ್ರೆಸ್ ಕೈ ಹಿಡಿಯದ ಮತದಾರರು: ಇಲ್ಲಿದೆ ಸೋಲಿಗೆ ಕಾರಣ

RAJASTHAN ELECTION: ರಾಜಸ್ಥಾನದಲ್ಲಿ ಕಾಂಗ್ರೆಸ್ ಕೈ ಹಿಡಿಯದ ಮತದಾರರು: ಇಲ್ಲಿದೆ ಸೋಲಿಗೆ ಕಾರಣ

ಜೈಪುರ್: ರಾಜಸ್ಥಾನ ವಿಧಾನಸಭೆ ಚುನಾವಣೆಯ (Rajasthan assembly election result 2023) ಮತ ಎಣಿಕೆ ಪ್ರಗತಿಯಲ್ಲಿದ್ದು, ಬಿಜೆಪಿ (BJP) ಬಹುಮತ ಗಳಿಸುವುದು ಬಹುತೇಕ ದೃಢಪಟ್ಟಿದೆ. ಆಡಳಿತಾರೂಢ ಕಾಂಗ್ರೆಸ್ (Congress) ಸುಮಾರು 70 ಸ್ಥಾನಗಳಲ್ಲಷ್ಟೇ ಮುನ್ನಡೆ ಕಾಯ್ದುಕೊಂಡಿದೆ. ಮಾಜಿ ಸಿಎಂ ಮತ್ತು ಝಲ್ರಾಪಟನ್ ನ (Jhalrapatan) ಬಿಜೆಪಿ ಅಭ್ಯರ್ಥಿ ವಸುಂಧರಾ ರಾಜೆ (Vasundhara Raje) 53,193 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದು, 1,38,831 ಮತಗಳನ್ನು ಗಳಿಸಿ ಭರ್ಜರಿ ಜಯ ಸಾಧಿಸಿದ್ದಾರೆ.

ರಾಜಸ್ಥಾನದಲ್ಲಿ ಬಿಜೆಪಿ ಮುನ್ನಡೆ ಸಾಧಿಸುವ ಮೂಲಕ ಅಶೋಕ್ ಗೆಹಲೋಟ್ (Ashok Gehlot) ನೇತೃತ್ವದ ಕಾಂಗ್ರೆಸ್ ಸರ್ಕಾರವನ್ನು ಜನ ಅಧಿಕಾರದಿಂದ ಕೆಳಗಳಿಸಿದ್ದಾರೆ. ಇದರೊಂದಿಗೆ, ರಾಜ್ಯದಲ್ಲಿ ಕಳೆದ 25 ವರ್ಷಗಳಿಂದ ನಡೆದುಕೊಂಡು ಬಂದ ಸಂಪ್ರದಾಯ ಮತ್ತೊಮ್ಮೆ ಮುಂದುವರೆದಿದೆ. ಕಾಂಗ್ರೆಸ್ ನಂತರ ಬಿಜೆಪಿ ಸರ್ಕಾರ ರಚನೆಯಾಗಲಿದೆ. ಆದರೆ ಕಾಂಗ್ರೆಸ್ ಸೋಲಿಗೆ ಹಲವು ಕಾರಣಗಳಿವೆ.

ಪೈಲಟ್ ಮತ್ತು ಗೆಹ್ಲೋಟ್ ಕದನ

ಸಚಿನ್ ಪೈಲಟ್ (Sachin pilot) ಮತ್ತು ಅಶೋಕ್ ಗೆಹ್ಲೋಟ್ ನಡುವಿನ ರಾಜಕೀಯ ಸಂಘರ್ಷ ಭಾರೀ ದೊಡ್ಡ ಸುದ್ದಿಯಾಗಿತ್ತು. ಅಶೋಕ್ ವಿರುದ್ಧ ಬಂಡಾಯವೆದಿದ್ದ ಸಚಿತ್ ಕಾಲ್ನಡಿಗೆ ಮೂಲಹ ಹೋರಾಟ ನಡೆಸಿದ್ದರು. ಹಲವು ಬಾರಿ ಹೈಕಮಾಂಡ್ ಇಬ್ಬರ ಮನವೊಲಿಸಲು ಪ್ರಯತ್ನಿಸಿದರೂ, ಸ್ವತಃ ರಾಹುಲ್ ಗಾಂಧಿ (Rahul Gandhi) ಕೂಡ ಚುನಾವಣಾ ಪ್ರಚಾರದ ವೇಳೆ ಇಬ್ಬರನ್ನೂ ಒಟ್ಟಿಗೆ ಕರೆದು ಪಕ್ಷದಲ್ಲಿ ಎಲ್ಲವೂ ಚೆನ್ನಾಗಿದೆ ಎಂಬ ಸಂದೇಶ ರವಾನಿಸಲು ಯತ್ನಿಸಿದರೂ ಅವರು ಒಂದಾಗಲಿಲ್ಲ. ಇದು ರಾಜಸ್ಥಾನದಲ್ಲಿ ಪಕ್ಷದ ಬಗ್ಗೆ ಇದ್ದ ಭರವಸೆ ಹೊರಟುಹೋಗಲು ಕಾರಣವಾಯಿತು. ಕಾಂಗ್ರೆಸ್ ನ ಇಂದಿನ ಸೋಲಿಗೆ ಇದು ಪ್ರಮುಖ ಕಾರಣವಾಗಿದೆ.

ಆಂತರಿಕ ಕಲಹಗಳು

ರಾಜಸ್ಥಾನದಲ್ಲಿ ಕಾಂಗ್ರೆಸ್ ಸೋಲಿಗೆ ಪ್ರಮುಖ ಕಾರಣ ಪಕ್ಷದೊಳಗಿನ ಕಲಹ. ಅನೇಕ ನಾಯಕರು ಬಂಡಾಯವೆದ್ದಾಗ, ಭಿನ್ನಮತ ಪ್ರದರ್ಶಿಸಿದಾಗ ಗೆಹ್ಲೋಟ್ ಅವರನ್ನು ಸರಿಯಾಗಿ ನಿಭಾಯಿಸಲಿಲ್ಲ. ಪಕ್ಷದೊಳಗಿನ ಗುಂಪುಗಾರಿಕೆ ಮತ್ತು ಅನೇಕ ಬಂಡಾಯ ನಾಯಕರು ಪಕ್ಷದ ಸೋಲಿಗೆ ಕಾರಣವಾಗಿದ್ದಾರೆ. ಅಲ್ಲದೆ, ಅಶೋಕ್ ಗೆಹ್ಲೋಟ್ ಅವರ ದುರಹಂಕಾರ, ಅತಿಯಾದ ಆತ್ಮವಿಶ್ವಾಸ ಅವರನ್ನು ಅಧಿಕಾರದಿಂದ ಕೆಳಗಿಳಿಸಿತು ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಗೆಹ್ಲೋಟ್ ಅವರ ಸಹೋದ್ಯೋಗಿಗಳೇ ಅವರನ್ನು ದುರಹಂಕಾರಿ ಎಂದು ಆರೋಪಿಸಿದ್ದರು. ಸರ್ಕಾರ ರಚನೆಯಾದಾಗಿನಿಂದ ಕಾಂಗ್ರೆಸ್​ನ ಅನೇಕ ಶಾಸಕರು ತಮ್ಮ ಅಭಿಪ್ರಾಯಗಳನ್ನು ಸಿಎಂ ಕೇಳುತ್ತಿಲ್ಲ ಎಂದು ಆರೋಪಿಸಿದ್ದರು.

ಪ್ರಶ್ನೆ ಪತ್ರಿಕೆ ಸೋರಿಕೆ

ರಾಜಸ್ಥಾನದಲ್ಲಿ ನೇಮಕಾತಿ ಪರೀಕ್ಷೆಗಳ ಪ್ರಶ್ನೆ ಪತ್ರಿಕೆ ಸೋರಿಕೆ ವಿಷಯವು ಗೆಹ್ಲೋಟ್ ಸರ್ಕಾರದ ಮೇಲೆ ಪರಿಣಾಮ ಬೀರಿತು. ಚುನಾವಣೆಯ ಸಮಯದಲ್ಲಿ ಬಿಜೆಪಿ ಈ ವಿಷಯವನ್ನು ಪ್ರಸ್ತಾಪಿಸಿ ಕಾಂಗ್ರೆಸ್ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿತು. ಪ್ರಶ್ನೆ ಪತ್ರಿಕೆ ಸೋರಿಕೆ ವಿಚಾರದಲ್ಲಿ ಯುವಕರ ಕೋಪಕ್ಕೆ ಗೆಹ್ಲೋಟ್ ಗುರಿಯಾಗಬೇಕಾಯಿತು. ಗೆಹ್ಲೋಟ್ ಅವರ ಅಧಿಕಾರಾವಧಿಯಲ್ಲಿ ಕಳೆದ ಐದು ವರ್ಷಗಳ ಅವಧಿಯಲ್ಲಿ, ಹಲವು ಪರೀಕ್ಷೆಗಳ ಪ್ರಶ್ನೆ ಪತ್ರಿಕೆ ಸೋರಿಕೆ (question paper leak) ಪ್ರಕರಣಗಳು ಬೆಳಕಿಗೆ ಬಂದವು. ಇದು ಕಾಂಗ್ರೆಸ್ ಸರ್ಕಾರಕ್ಕೆ ಹಿನ್ನಡೆ ಉಂಟುಮಾಡಿತು.

ಕಾನೂನು ಮತ್ತು ಸುವ್ಯವಸ್ಥೆ

ರಾಜಸ್ಥಾನ ಚುನಾವಣೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕೂಡ ಪ್ರಮುಖ ವಿಷಯವಾಗಿತ್ತು. ಮಹಿಳೆಯರ ಮೇಲಿನ ಅನೇಕ ಅಪರಾಧಗಳ ಘಟನೆಗಳು ಚರ್ಚೆಗೆ ಬಂದವು. ಗೆಹ್ಲೋಟ್ ಸರ್ಕಾರದಲ್ಲಿ ಮಹಿಳೆಯರ ಮೇಲಿನ ಅಪರಾಧಗಳಲ್ಲಿ ರಾಜ್ಯ ಮೊದಲ ಸ್ಥಾನದಲ್ಲಿದೆ ಎಂದು ಬಿಜೆಪಿ ಬಿಂಬಿಸಿತು. ಈ ಎಲ್ಲ ಕಾರಣಗಳಿಂದ ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲನುಭವಿಸಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ಹೆಚ್ಚಿನ ಸುದ್ದಿ