Sunday, July 7, 2024
Homeಕ್ರೀಡೆT20 CELEBRATIONS : ಟಿ20 ವಿಶ್ವಕಪ್ ಟ್ರೋಫಿಗೆ ಮುತ್ತಿಕ್ಕಿದ ಭಾರತ : ದೇಶಾದ್ಯಂತ ಅಭಿಮಾನಿಗಳ ಸಂಭ್ರಮಾಚರಣೆ...

T20 CELEBRATIONS : ಟಿ20 ವಿಶ್ವಕಪ್ ಟ್ರೋಫಿಗೆ ಮುತ್ತಿಕ್ಕಿದ ಭಾರತ : ದೇಶಾದ್ಯಂತ ಅಭಿಮಾನಿಗಳ ಸಂಭ್ರಮಾಚರಣೆ – VIDEO

ನವದೆಹಲಿ: ಟೀಂ ಇಂಡಿಯಾ ಟಿ20 ವಿಶ್ವಕಪ್ ಟ್ರೋಫಿ ಮುಡಿಗೇರಿಸಿಕೊಳ್ಳುತ್ತಿದ್ದಂತೆ ದೇಶಾದ್ಯಂತ ಸಂಭ್ರಮ ಮನೆ ಮಾಡಿದೆ. ಮಧ್ಯರಾತ್ರಿಯವರೆಗೆ ಕ್ರಿಕೆಟ್ ಅಭಿಮಾನಿಗಳು ಕುಣಿದು, ಕುಪ್ಪಳಿಸಿದರು. ಪಟಾಕಿ ಸಿಡಿಸಿ ಸಂಭ್ರಮಿಸಿದರು.

ಬ್ರಿಡ್ಜ್‌ಟೌನ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದ ಕೊನೆಯ ನಾಲ್ಕು ಓವರ್ ಗಳು ತೀವ್ರ ಜಿದ್ದಾಜಿದ್ದಿನಿಂದ ಕೂಡಿತ್ತು. ಅಂತಿಮವಾಗಿ ಭಾರತ 7 ರನ್ ಗಳಿಂದ ದಕ್ಷಿಣ ಆಫ್ರಿಕಾವನ್ನು ಮಣಿಸಿ ಟ್ರೋಫಿಯನ್ನು ಎತ್ತಿಹಿಡಿಯಿತು. ಕೊನೆಯ ಓವರ್ ನಲ್ಲಿ ಹಾರ್ದಿಕ ಪಾಂಡ್ಯ ಬಿಗಿ ಹಿಡಿತದ ಬೌಲಿಂಗ್ ಭಾರತಕ್ಕೆ ಕಪ್ ತಂದುಕೊಡುವಲ್ಲಿ ಮಹತ್ವದ ಪಾತ್ರ ವಹಿಸಿತು. ಭಾರತ ಪಂದ್ಯ ಗೆಲ್ಲುತ್ತಲ್ಲೇ ಆಟಗಾರರು ಭಾವುಕರಾದರು. ಇತ್ತ ಕ್ರೀಡಾಂಗಣದಲ್ಲಿದ್ದ ಅಭಿಮಾನಿಗಳು ಸಂಭ್ರಮದಲ್ಲಿ ತೇಲುತ್ತಿದ್ದರು. ಭಾರತದ ಗಲ್ಲಿ ಗಲ್ಲಿಗಳಲ್ಲೂ ಸಂಭ್ರಮಾಚರಣೆ ನಡೆಸಿದ ದೃಶ್ಯಗಳು ಕಂಡು ಬಂದವು.

ಮುತ್ತಿನ ನಗರಿ ಹೈದರಾಬಾದಿನಲ್ಲಿ ಮಧ್ಯರಾತ್ರಿ ಕ್ರಿಕೆಟ್ ಅಭಿಮಾನಿಗಳು ಸಂಭ್ರಮ ನೋಡಲು ಎರಡು ಕಣ್ಣುಗಳು ಸಾಲದು ಎಂಬಂತಿತ್ತು. ರಾಷ್ಟ್ರಧ್ವಜ ಹಿಡಿದು ರಸ್ತೆಯಲ್ಲಿ ಕುಣಿಯುತ್ತ ಅಭಿಮಾನಿಗಳು ಸಾಗುತ್ತಿದ್ದರು. ಕಾರು, ಬೈಕುಗಳಲ್ಲಿ ನೂರಾರು ಜನ ಜಾಥಾ ನಡೆಸಿದರು. ಬಾನಂಗಳದಲ್ಲಿ ಪಟಾಕಿಗಳು ಚಿತ್ತಾರ ಮೂಡಿಸುತ್ತಿದ್ದವು. ಬೆಂಗಳೂರಿನ ಹೆಚ್ ಎಸ್ ಆರ್ ಲೇಔಟ್ ನಲ್ಲಿ ಜಮಾಗೊಂಡ ಅಭಿಮಾನಿಗಳು ಭಾರತ ತಂಡಕ್ಕೆ ಶುಭ ಕೋರುತ್ತ ಸಂಭ್ರಮ ಹಂಚಿಕೊಂಡರು.

ಇನ್ನು ಟೀಂ ಇಂಡಿಯಾ ಟಿ20 ವಿಶ್ವಕಪ್ ಗೆಲ್ಲುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿ ಅವರು ತಂಡದ ಆಟಗಾರರಿಗೆ ಶುಭಾಶಯ ತಿಳಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವೀಡಿಯೋವನ್ನು ಪೋಸ್ಟ್ ಮಾಡಿದ ಪ್ರಧಾನಿ ಮೋದಿ, ತಂಡವು ಟಿ20 ವಿಶ್ವಕಪ್ ಅನ್ನು ಮನೆಗೆ ತಂದಿರುವುದು ನಮಗೆ ಹೆಮ್ಮೆ ತಂದಿದೆ ಎಂದು ಹೇಳಿದ್ದಾರೆ. ಈ ಗೆಲುವು ಪ್ರತಿಯೊಬ್ಬ ಭಾರತೀಯನ ದೊಡ್ಡ ವಿಜಯವಾಗಿದೆ. ಭಾರತೀಯ ಆಟಗಾರರು ವಿಶ್ವಕಪ್ ಟ್ರೋಫಿ ಜೊತೆಗೆ ಕೋಟ್ಯಂತರ ಭಾರತೀಯರ ಹೃದಯವನ್ನೂ ಗೆದ್ದಿದ್ದಾರೆ. ಒಂದೇ ಒಂದು ಪಂದ್ಯವನ್ನು ಸೋಲದೆ ಈ ದಿಗ್ವಿಜಯವನ್ನು ಸಾಧಿಸಿದ್ದೀರಿ ಎಂದು ಹೇಳಿದ್ದಾರೆ.

ಹೆಚ್ಚಿನ ಸುದ್ದಿ