Sunday, July 7, 2024
Homeಕ್ರೀಡೆInd vs ban: ಹಾರ್ದಿಕ್ ಅಬ್ಬರದ ಆಟ : ಭಾರತದ ಎದುರು ಮಂಡಿಯೂರಿದ ಬಾಂಗ್ಲಾದೇಶ

Ind vs ban: ಹಾರ್ದಿಕ್ ಅಬ್ಬರದ ಆಟ : ಭಾರತದ ಎದುರು ಮಂಡಿಯೂರಿದ ಬಾಂಗ್ಲಾದೇಶ

ನಾರ್ತ್‌ಸೌಂಡ್: ಸೂಪರ್ 8ರ ಹಂತದ ಪಂದ್ಯದಲ್ಲಿ ಬಾಂಗ್ಲಾದೇಶ ಎದುರು 50 ರನ್‌ಗಳಿಂದ ಜಯಭೇರಿ ಬಾರಿಸಿದ ಭಾರತ ತಂಡವು ಸೆಮಿಫೈಲ್‌ನತ್ತ ಮತ್ತೊಂದು ಹೆಜ್ಜೆ ಇಟ್ಟಿತು. ವಿವಿಯನ್ ರಿಚರ್ಡ್ಸ್ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಭಾರತದ ಎದುರು ಬಾಂಗ್ಲಾ ಮಂಡಿಯೂರಿತು.

ಟಾಸ್ ಗೆದ್ದ ಬಾಂಗ್ಲಾದೇಶ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಆರಂಭಿಕ ಹಂತದಲ್ಲಿ ತುಸು ಹಿಡಿತ ಸಾಧಿಸುವಲ್ಲಿಯೂ ಯಶಸ್ವಿಯಾಯಿತು. ಆದರೆ 6ನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದ ಹಾರ್ದಿಕ್ (ಅಜೇಯ 50; 27ಎ, 4X4, 6X3) ಅವರ ಮಿಂಚಿನ ಆಟದ ಬಲದಿಂದ ಭಾರತವು 20 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 196 ರನ್‌ ಗಳಿಸಿತು.

ಗುರಿ ಬೆನ್ನಟ್ಟಿದ ಬಾಂಗ್ಲಾದೇಶಕ್ಕೆ ಮೊದಲ ಆಘಾತ ನೀಡಿದವರೂ ಹಾರ್ದಿಕ್. ತಮ್ಮ ತಂಡಕ್ಕೆ ಉತ್ತಮ ಆರಂಭ ನೀಡಿದ್ದ ಲಿಟನ್ ದಾಸ್ (13; 10ಎ) ವಿಕೆಟ್ ಕಬಳಿಸಿದ ಹಾರ್ದಿಕ್ ಬಾಂಗ್ಲಾ ಪತನಕ್ಕೆ ಮುನ್ನುಡಿ ಬರೆದರು. ಅರ್ಷದೀಪ್ ಸಿಂಗ್ (30ಕ್ಕೆ2), ಜಸ್‌ಪ್ರೀತ್ ಬೂಮ್ರಾ (13ಕ್ಕೆ2) ಹಾಗೂ ಕುಲದೀಪ್ ಯಾದವ್ (19ಕ್ಕೆ3) ಅವರ ದಾಳಿಯ ಮುಂದೆ ಬಾಂಗ್ಲಾ 20 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 146 ರನ್‌ ಗಳಿಸಲಷ್ಟೇ ಶಕ್ತವಾಯಿತು.

8ರ ಹಂತದಲ್ಲಿ ಭಾರತಕ್ಕೆ ಇನ್ನೊಂದು ಪಂದ್ಯ (ಆಸ್ಟ್ರೇಲಿಯಾ ಎದುರು) ಮಾತ್ರ ಬಾಕಿ ಇದೆ. ಈ ಟೂರ್ನಿಯ ಗುಂಪು ಮತ್ತು ಸೂಪರ್ 8ರ ಘಟ್ಟದಲ್ಲಿ ರೋಹಿತ್ ಶರ್ಮಾ ಬಳಗವು ಒಂದೂ ಪಂದ್ಯದಲ್ಲಿ ಸೋತಿಲ್ಲ. ಆದರೆ ಬಾಂಗ್ಲಾದೇಶ ತಂಡವು ಆಡಿದ ಎರಡೂ ಪಂದ್ಯ ಗಳಲ್ಲಿ ಪರಾಭವಗೊಂಡು ನಿರ್ಗಮಿಸಿತು.

ಹಾರ್ದಿಕ್ ಅಮೋಘ ಸಾಧನೆ :

ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಶನಿವಾರ ಬಾಂಗ್ಲಾದೇಶ ವಿರುದ್ಧದ ಸೂಪರ್ ಎಂಟು ಪಂದ್ಯಗಳಲ್ಲಿ ಐಸಿಸಿ ಟಿ 20 ವಿಶ್ವಕಪ್ ಇತಿಹಾಸದಲ್ಲಿ ಅನನ್ಯ ಡಬಲ್ ಸಾಧನೆ ಮಾಡಿದರು. ಪಂದ್ಯದ ವೇಳೆ ಹಾರ್ದಿಕ್ ಪಂದ್ಯಾವಳಿಯ ಇತಿಹಾಸದಲ್ಲಿ 300 ಪ್ಲಸ್ ರನ್ ಮತ್ತು 20 ಪ್ಲಸ್ ವಿಕೆಟ್‌ಗಳನ್ನು ಪಡೆದ ಮೊದಲ ಭಾರತೀಯ ಆಟಗಾರ ಎನಿಸಿಕೊಂಡರು.

T20 ವಿಶ್ವಕಪ್ ವೃತ್ತಿಜೀವನದಲ್ಲಿ ಪಾಂಡ್ಯ 21 ಪಂದ್ಯಗಳಲ್ಲಿ ಮತ್ತು 13 ಇನ್ನಿಂಗ್ಸ್‌ಗಳಲ್ಲಿ 27.45 ಸರಾಸರಿ ಮತ್ತು 137.89 ಸ್ಟ್ರೈಕ್ ರೇಟ್‌ನಲ್ಲಿ 302 ರನ್ ಗಳಿಸಿದ್ದಾರೆ. ಅವರು 63 ರ ಅತ್ಯುತ್ತಮ ಸ್ಕೋರ್‌ನೊಂದಿಗೆ ಎರಡು ಅರ್ಧ ಶತಕಗಳನ್ನು ಸಹ ಗಳಿಸಿದ್ದಾರೆ. ಅಲ್ಲದೆ, ಅವರು 21 ವಿಕೆಟ್‌ಗಳನ್ನು ಪಡೆದಿದ್ದಾರೆ.

ಹೆಚ್ಚಿನ ಸುದ್ದಿ