Sunday, July 7, 2024
Homeಕ್ರೀಡೆBHAJRANG PUNIA : ಕುಸ್ತಿಪಟು ಭಜರಂಗ್‌ ಪುನಿಯಾ ಅಮಾನತ್ತು

BHAJRANG PUNIA : ಕುಸ್ತಿಪಟು ಭಜರಂಗ್‌ ಪುನಿಯಾ ಅಮಾನತ್ತು

ನವದೆಹಲಿ : ಭಾರತೀಯ ಕುಸ್ತಿ ಸಂಸ್ಥೆಯ ಮಾಜಿ ಅಧ್ಯಕ್ಷ ಬ್ರಿಜ್​ ಭೂಷಣ್​ ಸಿಂಗ್​ ವಿರುದ್ಧ ಹೋರಾಟ ನಡೆಸಿದ್ದ, ಒಲಿಂಪಿಕ್ಸ್​ ಕಂಚಿನ ಪದಕ ವಿಜೇತ ಕುಸ್ತಿಪಟು ಭಜರಂಗ್ ಪುನಿಯಾನ್ನು ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಘಟಕ ಮತ್ತೆ ಅಮಾನತು ಮಾಡಿದೆ.

ಇದೇ ವರ್ಷ ಮಾರ್ಚ್ 10ರಂದು ಸೋನೆಪತ್‌ನಲ್ಲಿ ನಡೆದ ಆಯ್ಕೆ ಟ್ರಯಲ್ಸ್ ವೇಳೆ ಉದ್ದೀಪನ ಮದ್ದು ಪರೀಕ್ಷೆಗೆ ಮೂತ್ರದ ಮಾದರಿ ನೀಡಲು ನಿರಾಕರಿಸಿದ್ದ ಆರೋಪದಲ್ಲಿ ಭಜರಂಗ್ ಅವರನ್ನು ಏಪ್ರಿಲ್ 23ರಂದು ನಾಡಾ ಅಮಾನತು ಮಾಡಿತ್ತು. ಅದರಂತೆ ವಿಶ್ವ ಕುಸ್ತಿ ಒಕ್ಕೂಟವೂ ಭಜರಂಗ್ ಅವರನ್ನು ಅಮಾನತು ಮಾಡಿತ್ತು.

ತನ್ನ ಕ್ರಮಕ್ಕೆ ಸಂಬಂಧಿಸಿದಂತೆ ನಾಡಾ ನೋಟಿಸ್ ನೀಡದ ಹಿನ್ನೆಲೆಯಲ್ಲಿ ಉದ್ದೀಪನ ಮದ್ದು ತಡೆ ಶಿಸ್ತು ಸಮಿತಿಯು ಮೇ 31ರಂದು ಅಮಾನತು ಆದೇಶ ರದ್ದುಮಾಡಿತ್ತು. ಇದೀಗ ಮತ್ತೊಮ್ಮೆ ಭಜರಂಗ್ ಅವರನ್ನು ಅಮಾನತು ಮಾಡಿರುವ ನಾಡಾ, ಈ ಬಾರಿ ಕ್ರಮದ ನೋಟಿಸ್‌ ಅನ್ನೂ ನೀಡಿದೆ.

ಈ ಬಗ್ಗೆ ಭಜರಂಗ್ ಪ್ರತಿಕ್ರಿಯೆ ನೀಡಿದ್ದು, ತಾನು ಎಂದಿಗೂ ಡೋಪ್​ ಮಾದರಿಯನ್ನು ನೀಡಲು ನಿರಾಕರಿಸಲಿಲ್ಲ. ತನಗೆ ಕಳುಹಿಸಲಾದ ಮಾದರಿಗಳ ಸಂಗ್ರಹ ಕಿಟ್​ ಅವಧಿ ಮೀರಿವೆ. 

ಈ ವಿಚಾರಕ್ಕೆ ಸಂಬಂಧಿಸಿದಂತೆ ನಾಡಾ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಕಿಟ್​ಗಳನ್ನು ಬದಲಿಸಲು ಸೂಚಿಸಿದರೂ, ಈ ಬಗ್ಗೆ ನಾಡಾ ಪ್ರತಿಕ್ರಿಯೆ ನೀಡಿಲ್ಲ ಎಂದು ತಾರಾ ಕುಸ್ತಿಪಟು ಭಜರಂಗ್ ಪುನಿಯಾ ಆರೋಪಿಸಿದ್ದಾರೆ.

ಹೆಚ್ಚಿನ ಸುದ್ದಿ