Sunday, July 7, 2024
Homeಲೈಫ್ ಸ್ಟೈಲ್Jackfruit Pickle: ಮಾವಿನಕಾಯಿಯಲ್ಲ, ಇಲ್ಲಿದೆ ಹಲಸಿನಕಾಯಿಯ ಉಪ್ಪಿನಕಾಯಿ ರೆಸಿಪಿ

Jackfruit Pickle: ಮಾವಿನಕಾಯಿಯಲ್ಲ, ಇಲ್ಲಿದೆ ಹಲಸಿನಕಾಯಿಯ ಉಪ್ಪಿನಕಾಯಿ ರೆಸಿಪಿ

ಬಡವರ ಆಹಾರ ಎಂದು ಕರೆಯಲ್ಪಡುತ್ತಿದ್ದ ಹಲಸು ಈಗ ವಿಶ್ವದೆಲ್ಲೆಡೆ ದಾಪುಗಾಲು ಹಾಕುತ್ತಿದೆ. ಹಲಸು ಎಂದರೆ ಮೂಗು ಮರಿಯುವ ಕಾಲ ಹೋಗಿ, ಅದರ ಸದುಪಯೋಗವನ್ನು ಅರಿತುಕೊಂಡು ಕೈಬೀಸಿ ಕರೆಯುವ ಹಾಗಾಗಿದೆ. ಎಲ್ಲೆಲ್ಲೂ ಹಲಸು ಮೇಳ ಪರಿಮಳ ಬೀರುತ್ತಿದೆ. ಈಗ ಹಲಸಿನ ಸೀಸನ್‌. ಎಳೆ ಹಲಸು ಮರದ ತುಂಬಾ ಜೋತಾಡುತ್ತಿದೆ. ಅದೇ ಹಲಸನ್ನು ಕೊಯಿದು ಉಪ್ಪಿನಕಾಯಿ ಹಾಕಿದ್ದರೆ ಹೇಗಿರುತ್ತದೆ… ಹಾಗಾದ್ರೆ ಬನ್ನಿ ತಯಾರಿಸಿದ ಹಲಸಿನ ಉಪ್ಪಿನಕಾಯಿ ಮಾಡೋದು ಹೇಗೆ ಎಂದು ನೋಡೋಣ…

ಬೇಕಾಗುವ ಸಾಮಗ್ರಿ:

ಗುಜ್ಜೆ ಹೋಳು- ಒಂದು ಕಪ್‌,

ಹರಳುಪ್ಪು- ಕಾಲು ಕಪ್‌,

ಮೆಣಸಿನ ಹುಡಿ- ನಾಲ್ಕು ಚಮಚ,

ಸಾಸಿವೆ- ಒಂದು ಚಮಚ,

ಜೀರಿಗೆ- ಒಂದು ಚಮಚ,

ಅರಸಿನ ಹುಡಿ- ಒಂದೂವರೆ ಚಮಚ,

ಬೆಲ್ಲ- ಸಣ್ಣ ತುಂಡು,

ಲಿಂಬೆ ರಸ- ಎರಡು ಚಮಚ.

ತಯಾರಿಸುವ ವಿಧಾನ:

ಎಳೆ ಗುಜ್ಜೆಯನ್ನು ಹೊರಗಿನ ಸಿಪ್ಪೆ , ಗೂಂಜು ತೆಗೆದು ಸಣ್ಣ ತುಂಡುಗಳಾಗಿ ಮಾಡಿಕೊಳ್ಳಿ. ಎರಡು ಗ್ಲಾಸು ನೀರಿಗೆ ಹರಳುಪ್ಪು ಹಾಕಿ ಕದಡಿಕೊಂಡು ಚೆನ್ನಾಗಿ ಕುದಿಸಿಕೊಳ್ಳಿ. ಇದಕ್ಕೆ ಗುಜ್ಜೆ ಹೋಳುಗಳನ್ನು ಹಾಕಿ ಮೆತ್ತಗೆ ಬೇಯಿಸಿಕೊಳ್ಳಿ.

ಸಾಸಿವೆ-ಜೀರಿಗೆಯನ್ನು ಎಣ್ಣೆ ಹಾಕದೆ ಹುರಿದು ಹುಡಿಮಾಡಿಟ್ಟುಕೊಳ್ಳಿ. ಕಾದ ಬಾಣಲೆಗೆ ಮೆಣಸಿನ ಹುಡಿ, ಅರಸಿನ ಹುಡಿ ಹಾಕಿ ಪರಿಮಳ ಬರುವವರೆಗೆ ಹುರಿದು ಗುಜ್ಜೆಯ ಹೋಳುಗಳನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ, ಬೇಯಿಸಿದ ನೀರನ್ನು ಸೇರಿಸಿ ಹದಗೊಳಿಸಿ ಕುದಿಸುತ್ತ ಇರಿ. ಬೆಲ್ಲ, ಸಾಸಿವೆ, ಜೀರಿಗೆ ಹುಡಿ, ಸ್ವಲ್ಪ ಉಪ್ಪು ಸೇರಿಸಿ ದಪ್ಪಗಾಗುವವರೆಗೆ ಕುದಿಸಿ ಇಳಿಸಿರಿ.

ಕೊನೆಗೆ ಲಿಂಬೆರಸ ಹಾಕಿ ಮುಚ್ಚಿಡಿ. ಆರಿದ ನಂತರ ಚೆನ್ನಾಗಿ ಕಲಸಿಕೊಂಡು ಜಾಡಿಯಲ್ಲಿ ಹಾಕಿಡಿ.

ಹೆಚ್ಚಿನ ಸುದ್ದಿ