Sunday, July 7, 2024
Homeಟಾಪ್ ನ್ಯೂಸ್Heatwave: ಕುದಿಯುತ್ತಿದೆ ಕಾಶ್ಮೀರ; ಶ್ರೀನಗರದಲ್ಲಿ ವರ್ಷದ ಅತಿ ಹೆಚ್ಚು ತಾಪಮಾನ ದಾಖಲು!

Heatwave: ಕುದಿಯುತ್ತಿದೆ ಕಾಶ್ಮೀರ; ಶ್ರೀನಗರದಲ್ಲಿ ವರ್ಷದ ಅತಿ ಹೆಚ್ಚು ತಾಪಮಾನ ದಾಖಲು!

ಶ್ರೀನಗರ: ದಕ್ಷಿಣ ಭಾರತದ ಬಳಿಕ ಉತ್ತರ ಭಾರತದಲ್ಲಿ ಈಗ ಬಿಸಿ ಗಾಳಿ ರುದ್ರತಾಂಡವವಾಡುತ್ತಿದೆ. ಮಂಜು ಬೀಳುವ ಕಾಶ್ಮೀರದಲ್ಲೇ ಬಿಸಿ ಗಾಳಿ ಎದ್ದಿದ್ದು, ರಾಜಧಾನಿ ಶ್ರೀನಗರದಲ್ಲಿ ಈ ವರ್ಷದಲ್ಲೇ ದಾಖಲೆಯ ತಾಪಮಾನ ದಾಖಲಾಗಿದೆ.

ಮಂಗಳವಾರ ಶ್ರೀನಗರದಲ್ಲಿ 34.6 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಕಳೆದ ದಿನ 31 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದ ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತ್ತಾವನ್ನೇ ತಾಪಮಾನದಲ್ಲಿ ಶ್ರೀನಗರ ಮೀರಿಸಿದೆ. ಸದ್ಯ ಈ ವಾರ ತಾಪಮಾನಕ್ಕೆ ಸ್ವಲ್ಪ ಬಿಡುವಿನ ಸಾಧ್ಯತೆಯಿದೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.

ಮಂಗಳವಾರ ನಗರದಲ್ಲಿ ಈ ವರ್ಷದ ಅತ್ಯಂತ ಬಿಸಿಯಾದ ದಿನವನ್ನು ದಾಖಲಿಸಿದೆ. ಕಳೆದ ದಶಕದಲ್ಲಿ ಇದು ಜುಲೈನಲ್ಲಿ ದಾಖಲಾದ ಎರಡನೇ ಗರಿಷ್ಠ ತಾಪಮಾನವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 2021ರ ಜುಲೈ 18 ರಂದು ನಗರದಲ್ಲಿ 35 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿ ಕಳೆದ ದಶಕದಲ್ಲೇ ಜುಲೈನ ಗರಿಷ್ಠ ತಾಪಮಾನದ ದಿನ ಎನಿಸಿಕೊಂಡಿತ್ತು.

ಏತನ್ಮಧ್ಯೆ ಕಣಿವೆಯ ಹೆಚ್ಚಿನ ಸ್ಥಳಗಳಲ್ಲಿ ಮಂಗಳವಾರ ದಾಖಲಾದ ಗರಿಷ್ಠ ತಾಪಮಾನ ಸಾಮಾನ್ಯಕ್ಕಿಂತ 5 ಡಿಗ್ರಿಗಳಷ್ಟು ಹೆಚ್ಚಾಗಿದೆ. ಉತ್ತರ ಕಾಶ್ಮೀರದ ಕುಪ್ವಾರ ಪಟ್ಟಣದಲ್ಲಿ ಸೋಮವಾರ ಗರಿಷ್ಠ 34.6 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದರೆ, ದಕ್ಷಿಣ ಕಾಶ್ಮೀರದ ಖಾಜಿಗುಂಡ್‌ನಲ್ಲಿ 34 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹೆಚ್ಚಿನ ಸುದ್ದಿ