Sunday, July 7, 2024
Homeಕ್ರೈಂHathras Stampede: ಪ್ರವಚನ ಕೇಳಲು ಹೋದ ಭಕ್ತರ ದುರಂತ ಅಂತ್ಯ: ಸಾವಿನ ಸಂಖ್ಯೆ 120ಕ್ಕೆ ಏರಿಕೆ!-...

Hathras Stampede: ಪ್ರವಚನ ಕೇಳಲು ಹೋದ ಭಕ್ತರ ದುರಂತ ಅಂತ್ಯ: ಸಾವಿನ ಸಂಖ್ಯೆ 120ಕ್ಕೆ ಏರಿಕೆ!- Video

ಲಕ್ನೋ: ಉತ್ತರ ಪ್ರದೇಶದ ಹತ್ರಾಸ್‌ನಲ್ಲಿ ಮಂಗಳವಾರ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಕಾಲ್ತುಳಿತ ಉಂಟಾಗಿ ಸಾವನ್ನಪ್ಪಿದವರ ಸಂಖ್ಯೆ 120 ದಾಟಿದೆ. ಪ್ರವಚನ ಕೇಳಲು ಹೋದ ಭಕ್ತರ ದುರಂತ ಸಾವಿಗೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ.

ಈ ಬಗ್ಗೆ ಲೋಕಸಭೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಘಟನೆಯಲ್ಲಿ ಮೃತಪಟ್ಟವರ ಆತ್ಮಕ್ಕೆ ಶಾಂತಿ ಸಿಗಲಿ, ಅವರ ಕುಟುಂಬಸ್ಥರಿಗೆ ದೇವರು ದುಃಖ ಭರಿಸುವ ಶಕ್ತಿ ನೀಡಲಿ ಎಂದು ಹೇಳಿದ್ದಾರೆ.

ವರದಿಗಳ ಪ್ರಕಾರ ಸಕರ್ ವಿಶ್ವ ಹರಿ ಅಥವಾ ಭೋಲೆ ಬಾಬಾ ಎಂದು ಕರೆಯಲ್ಪಡುವ ಸ್ವಯಂ-ಘೋಷಿತ ದೇವಮಾನವ ನಾರಾಯಣ ಸಾಕರ್ ಹರಿಗಾಗಿ ಮಾನವ್ ಮಂಗಲ್ ಮಿಲನ್ ಸದ್ಭಾವನಾ ಸಮಾಗಮ್ ಸಮಿತಿಯು ಹತ್ರಾಸ್ ಜಿಲ್ಲೆಯ ಹಳ್ಳಿಯೊಂದರಲ್ಲಿ ಸತ್ಸಂಗವನ್ನು ಆಯೋಜಿಸಿತ್ತು.

ಪ್ರವಚನ ಮುಗಿದ ಬಳಿಕ ಭಕ್ತರು ವಾಪಸಾಗುತ್ತಿದ್ದಂತೆ ಸ್ಥಳದಲ್ಲಿ ನೂಕುನುಗ್ಗಲು ಉಂಟಾಗಿದೆ. ಈ ವೇಳೆ ಕಾಲ್ತುಳಿತ ಸಂಭವಿಸಿದ್ದು ಮಹಿಳೆಯರು, ಮಕ್ಕಳು ಸೇರಿದಂತೆ ಇಲ್ಲಿಯವರೆಗೆ 120 ಕ್ಕೂ ಹೆಚ್ಚು ಜನರ ಸಾವಾಗಿದೆ.

ಈ ಬಗ್ಗೆ ಮಾತನಾಡಿರುವ ಪ್ರತ್ಯಕ್ಷದರ್ಶಿಯೊಬ್ಬರು, ನಾವು ಸತ್ಸಂಗಕ್ಕೆ ಬಂದಿದ್ದೆವು, ಅಲ್ಲಿ ದೊಡ್ಡ ಜನಸಂದಣಿ ಇತ್ತು. ಸತ್ಸಂಗ ಮುಗಿದ ನಂತರ ನಾವು ಹೊರಡಲು ಪ್ರಾರಂಭಿಸಿದೆವು. ನಿರ್ಗಮನ ಕಿರಿದಾಗಿತ್ತು. ನಾವು ಮೈದಾನದ ಕಡೆಗೆ ಹೊರಡಲು ಪ್ರಯತ್ನಿಸಿದಾಗ ಇದ್ದಕ್ಕಿದ್ದಂತೆ ಗಲಾಟೆ ಪ್ರಾರಂಭವಾಯಿತು. ಈ ವೇಳೆ ಏನು ಮಾಡಬೇಕೆಂದು ತೋಚಲಿಲ್ಲ ಎಂದಿದ್ದಾರೆ.

ಮತ್ತೊಬ್ಬ ಪ್ರತ್ಯಕ್ಷದರ್ಶಿ, ಸತ್ಸಂಗ ಮುಗಿದ ನಂತರ ಎಲ್ಲರೂ ಹೊರಗೆ ಬಂದರು. ಹೊರಗೆ ಎತ್ತರದಲ್ಲಿ ರಸ್ತೆ ನಿರ್ಮಿಸಲಾಗಿದ್ದು, ಕೆಳಗೆ ಚರಂಡಿ ನಿರ್ಮಿಸಲಾಗಿದೆ. ನೂಕುನುಗ್ಗಲು ಉಂಟಾಗಿದ್ದರಿಂದ ಒಬ್ಬರ ಹಿಂದೆ ಒಬ್ಬರು ಅದರಲ್ಲಿ ಬೀಳತೊಡಗಿದರು. ಕೆಲವರು ಕಾಲ್ತುಳಿತಕ್ಕೊಳಗಾದರು ಎಂದು ತಿಳಿಸಿದ್ದಾರೆ.

ಹೆಚ್ಚಿನ ಸುದ್ದಿ