Sunday, July 7, 2024
Homeಲೈಫ್ ಸ್ಟೈಲ್Evening Snacks: ಕ್ರಿಸ್ಪಿ ಕ್ರಿಸ್ಪಿ, ಯಮ್ಮಿ ಯಮ್ಮಿ ಆನಿಯನ್ ರಿಂಗ್ಸ್; ಸಂಜೆ ಸ್ನ್ಯಾಕ್ಸ್​ಗೆ ತಪ್ಪದೇ ಟ್ರೈ...

Evening Snacks: ಕ್ರಿಸ್ಪಿ ಕ್ರಿಸ್ಪಿ, ಯಮ್ಮಿ ಯಮ್ಮಿ ಆನಿಯನ್ ರಿಂಗ್ಸ್; ಸಂಜೆ ಸ್ನ್ಯಾಕ್ಸ್​ಗೆ ತಪ್ಪದೇ ಟ್ರೈ ಮಾಡಿ

ಸೂಪರ್‌, ಸಿಂಪಲ್‌, ಯಮ್ಮಿ ಸ್ನ್ಯಾಕ್ಸ್​ ರೆಸಿಪಿ ಅಂದರೆ ಆನಿಯನ್ ರಿಂಗ್ಸ್. ಇದನ್ನು ಮನೆಯಲ್ಲಿ ತುಂಬಾನೇ ಸುಲಭವಾಗಿ ಕೇವಲ ಹತ್ತೇ ನಿಮಿಷಗಳಲ್ಲಿ ಮಾಡಬಹುದು. ಸಾಮಾನ್ಯವಾಗಿ ಮನೆಯಲ್ಲಿ ಈರುಳ್ಳಿ ಇದ್ದೇ ಇರುತ್ತದೆ. ಮಕ್ಕಳು ಸಂಜೆ ವೇಳೆ ಸ್ನ್ಯಾಕ್ಸ್ ಕೇಳಿದಾಗ ಕೂಡಲೇ ಗರಿಗರಿಯಾದ ಆನಿಯನ್ (ಈರುಳ್ಳಿ) ರಿಂಗ್ಸ್ ಮಾಡಿಕೊಡಬಹುದು. ಕ್ರಿಸ್ಪಿ-ಕ್ರಿಸ್ಪಿಯಾಗಿರುವ ಆನಿಯನ್ ರಿಂಗ್ಸ್ ತಿನ್ನುತ್ತಿದ್ದರೆ ಇನ್ನಷ್ಟು ತಿನ್ನಬೇಕು ಅನಿಸುವಷ್ಟು ಟೇಸ್ಟಿಯಾಗಿರುತ್ತದೆ. ಮಕ್ಕಳು ಸಹ ಬಾಯಿ ಚಪ್ಪರಿಸಿಕೊಂಡು ತಿನ್ನುತ್ತಾ ಎಂಜಾಯ್‌ ಮಾಡುತ್ತಾರೆ. ರೆಸ್ಟೋರೆಂಟ್‌ ಸ್ಟೈಲ್‌ನಲ್ಲಿ ಆನಿಯನ್‌ ರಿಂಗ್ಸ್ ಮಾಡಲು ಈ ರೆಸಿಪಿ ನಿಮಗಾಗಿ ಇಲ್ಲಿದೆ ನೋಡಿ.

ಮಾಡಲು ಬೇಕಾಗುವ ಸಾಮಾಗ್ರಿಗಳು

ಈರುಳ್ಳಿ (ದೊಡ್ಡ ಗಾತ್ರ) – 2
ಮೈದಾಹಿಟ್ಟು – ಅರ್ಧ ಕಪ್
ಕಾರ್ನ್‌ಫ್ಲೋರ್ – 3 ಟೀ ಸ್ಪೂನ್
ಅಕ್ಕಿಹಿಟ್ಟು – 1 ಟೀ ಸ್ಪೂನ್
ಪೆಪ್ಪರ್ ಪೌಡರ್ – ಅರ್ಧ ಟೀ ಸ್ಪೂನ್
ಉಪ್ಪು – ರುಚಿಗೆ ತಕ್ಕಷ್ಟು
ಅಚ್ಚಖಾರದಪುಡಿ – 1 ಟೀ ಸ್ಪೂನ್
ಶುಂಠಿ-ಬೆಳ್ಳುಳ್ಳಿ ಪೇಸ್ಟ್ – 1 ಟೀ ಸ್ಪೂನ್
ಎಣ್ಣೆ – ಕರಿಯಲು ಬೇಕಾದಷ್ಟು

ಮಾಡುವ ವಿಧಾನ

ಮೊದಲಿಗೆ ಈರುಳ್ಳಿ ಸಿಪ್ಪೆ ತೆಗೆದು ರೌಂಡ್‌ (ರಿಂಗ್ಸ್ ರೀತಿಯಲ್ಲಿ) ಆಗಿ ಕಟ್‌ ಮಾಡಿಕೊಳ್ಳಬೇಕು. ಈರುಳ್ಳಿ ಅರ್ಧ ಇಂಚು ಇರುವ ರೀತಿ ರೌಂಡ್‌ ಆಗಿ ಕಟ್‌ ಮಾಡಿಕೊಳ್ಳಬೇಕು. ಕಟ್ ಮಾಡಿರುವ ಈರುಳ್ಳಿ ಪೀಸ್‌ಗಳ ಮೇಲೆ ಅರ್ಧ ಟೀ ಸ್ಪೂನ್ ಮೈದಾ ಹಿಟ್ಟು ಉದುರಿಸಿ ನಿಧಾನವಾಗಿ ಅದನ್ನು ಮಿಕ್ಸ್ ಮಾಡಿಕೊಳ್ಳಬೇಕು.

ಒಂದು ಬೌಲ್ ತೆಗೆದುಕೊಂಡು ಇದಕ್ಕೆ ಅರ್ಧ ಕಪ್ ಮೈದಾಹಿಟ್ಟು, 3 ಟೀ ಸ್ಪೂನ್ ಕಾರ್ನ್‌ಫ್ಲೋರ್, 1 ಟೀ ಸ್ಪೂನ್ ಅಕ್ಕಿಹಿಟ್ಟು, ರುಚಿಗೆ ತಕ್ಕಷ್ಟು ಉಪ್ಪು, ಅರ್ಧ ಟೀ ಸ್ಪೂನ್ ಪೆಪ್ಪರ್ ಪೌಡರ್ (ಕರಿಮೆಣಸಿನಪುಡಿ), 1 ಟೀ ಸ್ಪೂನ್ ಅಚ್ಚಖಾರದಪುಡಿ, 1 ಟೀ ಸ್ಪೂನ್‌ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ ಎಲ್ಲವನ್ನು ಚೆನ್ನಾಗಿ ಮಿಕ್ಸ್ ಮಾಡಿಕೊಂಡು ಅಗತ್ಯವಿದ್ದಷ್ಟು ನೀರು ಸೇರಿಸಿಕೊಂಡು ಬಜ್ಜಿ ಹಿಟ್ಟಿನ ಹದಕ್ಕೆ ಮಿಶ್ರಣ ರೆಡಿ ಮಾಡಿಕೊಳ್ಳಬೇಕು.

ಈರುಳ್ಳಿ ಪೀಸ್‌ಗಳನ್ನು ಹಿಟ್ಟಿಗೆ ಹಾಕಿ ನಂತರ ಒಂದು ಪ್ಲೇಟ್‌ನಲ್ಲಿ ಬ್ರೆಡ್ ಕ್ರಮ್ಸ್ (ಪೌಡರ್) ಹಾಕಿಟ್ಟುಕೊಂಡು ಅದಕ್ಕೆ ಈರುಳ್ಳಿ ಸ್ಲೈಸ್‌ಗಳನ್ನು ಹಾಕಬೇಕು.

ಸ್ಟೌವ್‌ ಮೇಲೆ ಬಾಣಲಿ ಇಟ್ಟು ಕರಿಯಲು ಅಗತ್ಯವಿದ್ದಷ್ಟು ಎಣ್ಣೆ ಹಾಕಿಕೊಳ್ಳಬೇಕು. ಎಣ್ಣೆ ಕಾದ ಬಳಿಕ ಈರುಳ್ಳಿ ಸ್ಲೈಸ್‌ಗಳನ್ನು ಹಾಕಿ ಗೋಲ್ಡನ್ ಬ್ರೌನ್‌ ಕಲರ್ ಬರುವವರೆಗೂ ಕರಿದುಕೊಳ್ಳಬೇಕು.

ಆನಿಯನ್ ರಿಂಗ್ಸ್ ಸರ್ವಿಂಗ್‌ ಪ್ಲೇಟ್‌ಗೆ ಹಾಕಿ ಇದರ ಜೊತೆಗೆ ಸಾಸ್ ಅಥವಾ ಕೆಚಪ್‌ ಕೊಟ್ಟರೆ, ಮನೆಮಂದಿ ಒಂದು ಉಳಿಯದಂತೆ ಖಾಲಿ ಮಾಡಿ ಮುಗಿಸುತ್ತಾರೆ.

ಹೆಚ್ಚಿನ ಸುದ್ದಿ