Sunday, July 7, 2024
Homeಟಾಪ್ ನ್ಯೂಸ್Bridge Collapse: ಬಿಹಾರದಲ್ಲಿ ಸಾಲು ಸಾಲು ಸೇತುವೆ ಕುಸಿತ; 15 ದಿನದಲ್ಲಿ 8ನೇ ಘಟನೆ!

Bridge Collapse: ಬಿಹಾರದಲ್ಲಿ ಸಾಲು ಸಾಲು ಸೇತುವೆ ಕುಸಿತ; 15 ದಿನದಲ್ಲಿ 8ನೇ ಘಟನೆ!

ಪಾಟ್ನಾ: ಬಿಹಾರದಲ್ಲಿ ಸಾಲು ಸಾಲು ಸೇತುವೆ ಕುಸಿತಗಳ ಘಟನೆ ನಡೆಯುತ್ತಲೇ ಇವೆ. ಬಿಹಾರದ ಸರನ್ ಜಿಲ್ಲೆಯಲ್ಲಿ ಸೇತುವೆಯೊಂದು ಕುಸಿದಿದ್ದು, ಇದು ಕಳೆದ 15 ದಿನಗಳಲ್ಲಿ ರಾಜ್ಯದಲ್ಲಿ ನಡೆದ 8ನೇ ಘಟನೆಯಾಗಿದೆ.

ಧಮಹಿ ನದಿಗೆ ಧೋಧ್ ಆಸ್ಥಾನ ದೇವಸ್ಥಾನದ ಬಳಿ ನಿರ್ಮಿಸಲಾದ ಈ ಸೇತುವೆ ಇಂದು ಕುಸಿದಿದೆ. ಘಟನೆಯಿಂದ ಸ್ಥಳೀಯ ಜನರಿಗೆ ಹೆಚ್ಚಿನ ಅನಾನುಕೂಲತೆ ಉಂಟಾಗಿದೆ. ಸೇತುವೆ ಕುಸಿಯುವ ವಿಡಿಯೋವನ್ನು ಸ್ಥಳೀಯರು ರೆಕಾರ್ಡ್‌ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ವರದಿಗಳ ಪ್ರಕಾರ ಕುಸಿತಗೊಂಡ ಸೇತುವೆಯನ್ನು ಗಂಡಕಿ ನದಿಗೆ ಬ್ರಿಟಿಷರ ಕಾಲದಲ್ಲಿ ನಿರ್ಮಿಸಲಾಗಿದ್ದ ಸೇತುವೆಯ ಬಳಿಯೇ ನಿರ್ಮಿಸಲಾಗಿದೆ. 2004ರಲ್ಲಿ ನಿರ್ಮಿಸಲಾದ ಸೇತುವೆ ಕುಸಿದರೂ ಬ್ರಿಟಿಷರ ಕಾಲದ ಸೇತುವೆ ಇಂದಿಗೂ ಭದ್ರವಾಗಿದೆ. ನದಿ ದಡದಲ್ಲಿ ಸ್ವಚ್ಛತಾ ಕಾರ್ಯ ನಡೆಯುತ್ತಿದ್ದ ಹಿನ್ನೆಲೆ ನದಿ ನೀರನ್ನು ತಡೆಹಿಡಿಯಲಾಗಿತ್ತು. ಬಳಿಕ ಬಿಡುಗಡೆ ಮಾಡಿದ್ದು, ನೀರಿನ ಬಲವಾದ ಹೊಡೆತಕ್ಕೆ ಸೇತುವೆ ಕುಸಿದಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಕಳೆದ 15 ದಿನಗಳಲ್ಲಿ ಬಿಹಾರದಲ್ಲಿ ಸಾಲು ಸಾಲು ಸೇತುವೆಗಳ ಕುಸಿತಗಳು ನಡೆದಿವೆ. ಮಧುಬನಿ, ಅರಾರಿಯಾ, ಪೂರ್ವ ಚಂಪಾರಣ್, ಕಿಶನ್‌ಗಂಜ್ ಸೇರಿದಂತೆ ಕೆಲ ಜಿಲ್ಲೆಗಳಲ್ಲಿ ಸೇತುವೆ ಕುಸಿತ ಘಟನೆಗಳು ವರದಿಯಾಗಿವೆ. ಸೇತುವೆ ಕುಸಿತಗಳಿಂದಾಗಿ ಬಿಹಾರದ ರಾಜಕೀಯದಲ್ಲಿ ದೊಡ್ಡ ಚರ್ಚೆ ಏರ್ಪಟ್ಟಿದೆ. ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಸರ್ಕಾರ ಆಡಳಿತದಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಸುತ್ತಿದೆ. ಇದರಿಂದ ಸೇತುವೆಗಳು ಕುಸಿಯುತ್ತಿವೆ ಎಂದು ವಿರೋಧ ಪಕ್ಷಗಳು ಟೀಕಿಸಿವೆ.

ಹೆಚ್ಚಿನ ಸುದ್ದಿ