Monday, June 15, 2026
Homeಟಾಪ್ ನ್ಯೂಸ್CHINA: ಕರುವಿಯಿಂದ ಚೀನೀ ಪವರ್ ಟೂಲ್ಸ್​ಗೆ ಭಾರೀ ಟಕ್ಕರ್..

CHINA: ಕರುವಿಯಿಂದ ಚೀನೀ ಪವರ್ ಟೂಲ್ಸ್​ಗೆ ಭಾರೀ ಟಕ್ಕರ್..

ಚೆನ್ನೈ: ಮಾಹಿತಿ ತಂತ್ರಜ್ಞಾನ (IT) ಹಾಗೂ ಸಾಫ್ಟ್‌ವೇರ್ ಕ್ಷೇತ್ರದಲ್ಲಿ ‘ಜೊಹೊ’ (Zoho) ಸಂಸ್ಥೆಯ ಮೂಲಕ ಜಾಗತಿಕ ಮಟ್ಟದಲ್ಲಿ ಕ್ರಾಂತಿ ಮಾಡಿರುವ ಭಾರತದ ಹೆಮ್ಮೆಯ ಉದ್ಯಮಿ ಶ್ರೀಧರ್ ವೆಂಬು(Shridar Vembu), ಈಗ ಉತ್ಪಾದನಾ (Manufacturing) ರಂಗದಲ್ಲೂ ಭಾರತದ ಮುದ್ರೆ ಒತ್ತಲು ಸಜ್ಜಾಗಿದ್ದಾರೆ. ಚೀನೀ(China) ಕಂಪನಿಗಳ ಸಂಪೂರ್ಣ ಪ್ರಾಬಲ್ಯವಿರುವ ಪವರ್ ಟೂಲ್ಸ್ ಮಾರುಕಟ್ಟೆಯಲ್ಲಿ ಭಾರತೀಯ ಸತ್ವವನ್ನು ಸಾಬೀತುಪಡಿಸಲು ಅವರು ‘ಕರುವಿ’ (Karuvi) ಎಂಬ ಮೆಕಾಟ್ರಾನಿಕ್ಸ್ ಸ್ಟಾರ್ಟಪ್ ಮೂಲಕ ಹೊಸದೊಂದು ಹಾರ್ಡ್‌ವೇರ್ ಕ್ರಾಂತಿಗೆ ನಾಂದಿ ಹಾಡಿದ್ದಾರೆ.

ಈಗಾಗಲೇ ‘ಕರುವಿ’ ಸಂಸ್ಥೆಯ ಮೊದಲ ಹಂತದ ಉತ್ಪನ್ನಗಳು ಸಿದ್ಧವಾಗಿದ್ದು, ಪ್ರಾಯೋಗಿಕವಾಗಿ ಗ್ರಾಹಕರ ಕೈಸೇರಿವೆ ಎಂದು ಸಂಸ್ಥೆಯ ಮುಖ್ಯ ವಿಜ್ಞಾನಿ ಹಾಗೂ ಮಾಜಿ ಸಿಇಒ ಶ್ರೀಧರ್ ವೆಂಬು ಮಾಹಿತಿ ಹಂಚಿಕೊಂಡಿದ್ದಾರೆ. ಚೀನಾ ಉತ್ಪನ್ನಗಳನ್ನು ಎದುರಿಸಬೇಕಾದರೆ ಕೇವಲ ಕಡಿಮೆ ಬೆಲೆಯಷ್ಟೇ ಸಾಲದು, ಜಾಗತಿಕ ಗುಣಮಟ್ಟವನ್ನು ಸರಿಗಟ್ಟುವುದು (Matching Global Quality) ಅತ್ಯಂತ ಪ್ರಮುಖ ಸವಾಲಾಗಿತ್ತು ಎಂದು ಅವರು ವಿವರಿಸಿದ್ದಾರೆ.

ತಮಿಳು ಭಾಷೆಯಲ್ಲಿ ‘ಕರುವಿ’ ಎಂದರೆ ಉಪಕರಣ ಅಥವಾ ಸಾಧನ ಎಂದರ್ಥ. ಸುಮಾರು ಎರಡು ವರ್ಷಗಳ ಹಿಂದೆ ತಮಿಳುನಾಡಿನ ಅತ್ಯಂತ ಗ್ರಾಮೀಣ ಪ್ರದೇಶವಾದ ತೆನ್ಕಾಸಿಯಲ್ಲಿ ಒಂದು ಸಣ್ಣ ಇಂಜಿನಿಯರಿಂಗ್ ತಂಡದೊಂದಿಗೆ ಈ ಸಾಹಸವನ್ನು ಪ್ರಾರಂಭಿಸಲಾಯಿತು. ಶ್ರೀಧರ್ ವೆಂಬು ಮತ್ತು ಟೋನಿ ಥಾಮಾಸ್ ಜಂಟಿಯಾಗಿ ಈ ತಾಂತ್ರಿಕ ಸಂಸ್ಥೆಯನ್ನು ಸ್ಥಾಪಿಸಿದ್ದಾರೆ.

ಈ ಬ್ರ್ಯಾಂಡ್ ಅಡಿಯಲ್ಲಿ ಕೈಗಾರಿಕಾ ಮತ್ತು ಗ್ರಾಹಕ ಬಳಕೆಯ ರೋಟರಿ ಡ್ರಿಲ್ಸ್, ಹ್ಯಾಮರ್ ಡ್ರಿಲ್ಸ್, ಆಂಗಲ್ ಗ್ರೈಂಡರ್ಸ್, ಡೆಮೋಲಿಷನ್ ಹ್ಯಾಮರ್ಸ್ ಮತ್ತು ಗರಗಸಗಳಂತಹ (Saws) ಪ್ರಮುಖ ಪವರ್ ಟೂಲ್‌ಗಳನ್ನು ವಾಣಿಜ್ಯ ಉತ್ಪಾದನೆಗೆ ಸಿದ್ಧಪಡಿಸಲಾಗಿದೆ. ಇವುಗಳನ್ನು ಕೇವಲ ಸಾಮಾನ್ಯ ಯಂತ್ರಗಳಾಗಿ ಮಾಡದೆ, ಮೋಟಾರ್ ತಂತ್ರಜ್ಞಾನ, ವಸ್ತು ವಿಜ್ಞಾನ (Material Science) ಮತ್ತು ಅತ್ಯಾಧುನಿಕ ಎಲೆಕ್ಟ್ರಾನಿಕ್ಸ್ ಬಳಸಿ ನಿಖರವಾಗಿ ವಿನ್ಯಾಸಗೊಳಿಸಲಾಗಿದೆ.

ಚೀನಾವನ್ನು ಮೆಟ್ಟಿನಿಲ್ಲಲು ವೆಂಬು ಅವರ 3 ಸೂತ್ರಗಳು

  • ಗುಣಮಟ್ಟದಲ್ಲಿ ರಾಜಿ ಇಲ್ಲ: ಭಾರತೀಯರು ಕೇವಲ ಅಗ್ಗದ ದರವನ್ನು ನೋಡುವುದಿಲ್ಲ, ಬದಲಿಗೆ ಬಾಳಿಕೆಯನ್ನು ಬಯಸುತ್ತಾರೆ. ಹಾಗಾಗಿ ಚೀನಾ ಆಮದುಗಳಿಗೆ ತಕ್ಕ ಟಕ್ಕರ್ ನೀಡಲು ಜಾಗತಿಕ ಮಟ್ಟದ ಫಿನಿಷಿಂಗ್ ಮತ್ತು ದಕ್ಷತೆಯನ್ನು ಕರುವಿ ಉತ್ಪನ್ನಗಳಿಗೆ ನೀಡಲಾಗಿದೆ.
  • ಗ್ರಾಮೀಣ ಯುವಕರಿಗೆ ಉದ್ಯೋಗ: ಜೊಹೊ ಮಾದರಿಯಲ್ಲೇ ಈ ಉತ್ಪಾದನಾ ಘಟಕವನ್ನೂ ಗ್ರಾಮೀಣ ಭಾಗದಲ್ಲೇ (ತೆನ್ಕಾಸಿ) ಸ್ಥಾಪಿಸಲಾಗುತ್ತಿದ್ದು, ಹಳ್ಳಿಯ ಯುವಕರಿಗೆ ಅತ್ಯಾಧುನಿಕ ಹಾರ್ಡ್‌ವೇರ್ ಮತ್ತು ಮೆಕ್ಯಾನಿಕಲ್ ಎಂಜಿನಿಯರಿಂಗ್ ಕ್ಷೇತ್ರಗಳಲ್ಲಿ ಉದ್ಯೋಗ ನೀಡಲಾಗುತ್ತಿದೆ.
  • ಕೈಗೆಟುಕುವ ಬೆಲೆ: ಅತ್ಯುತ್ತಮ ಗುಣಮಟ್ಟ ಹೊಂದಿದ್ದರೂ, ಮಧ್ಯಮ ವರ್ಗದ ಕಾರ್ಮಿಕರು ಮತ್ತು ಸಣ್ಣ ಕೈಗಾರಿಕೆಗಳಿಗೆ ಹೊರೆಯಾಗದಂತೆ ಕೈಗೆಟುಕುವ ದರದಲ್ಲಿ ಮಾರುಕಟ್ಟೆಗೆ ತರಲಾಗುತ್ತಿದೆ.

ಈ ಕ್ಷೇತ್ರಕ್ಕೆ ವೆಂಬು ಕಾಲಿಟ್ಟಿದ್ದರ ಹಿಂದಿದೆ ಸ್ವಾರಸ್ಯಕರ ಕಥೆ!

ಟ್ವಿಟರ್ (X) ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಬರೆದುಕೊಂಡಿರುವ ಶ್ರೀಧರ್ ವೆಂಬು, ಕೋವಿಡ್ ಸಾಂಕ್ರಾಮಿಕದ ಸಮಯದಲ್ಲಿ ಮದ್ಯಪ್ರಾಚ್ಯದ (Middle East) ಪ್ರಮುಖ ಎಲೆಕ್ಟ್ರಾನಿಕ್ಸ್ ವಿತರಕರಾದ ಅಬ್ದುಲ್ ಗಫೂರ್ ಅವರು ನನ್ನನ್ನು ಭೇಟಿಯಾಗಿ ಹ್ಯಾಂಡ್ ಟೂಲ್‌ಗಳ ಬಾಕ್ಸ್ ತೋರಿಸಿದ್ದರು. ಇದನ್ನು ಜೊಹೊ ಸಂಸ್ಥೆ ತಯಾರಿಸಬೇಕು, ಜಾಗತಿಕವಾಗಿ ವಿತರಣೆ ಮಾಡುವ ಜವಾಬ್ದಾರಿ ನನ್ನದು ಎಂದಿದ್ದರು. ಆಗ ನಮಗೆ ಹಾರ್ಡ್‌ವೇರ್ ಬಗ್ಗೆ ಏನೂ ತಿಳಿದಿರಲಿಲ್ಲ. ಆದರೆ ಇದು ಗ್ರಾಮೀಣ ಭಾಗದಲ್ಲಿ ದೊಡ್ಡ ಮಟ್ಟದ ಉದ್ಯೋಗ ಸೃಷ್ಟಿಸುತ್ತದೆ ಎಂದು ಅವರು ಹೇಳಿದಾಗ ನಾನು ಈ ಸವಾಲನ್ನು ಸ್ವೀಕರಿಸಿದೆ, ಎಂದರು.

 ಭಾರತವು ಕೇವಲ ಸಾಫ್ಟ್‌ವೇರ್‌ನಲ್ಲಿ ಮಾತ್ರವಲ್ಲದೆ, ಹಾರ್ಡ್‌ವೇರ್ ಮತ್ತು ಮೆಕ್ಯಾನಿಕಲ್ ಉತ್ಪಾದನಾ ವಲಯದಲ್ಲೂ ಜಾಗತಿಕ ಮಟ್ಟದ ಯಶಸ್ಸನ್ನು ಸಾಧಿಸಬಹುದು ಎಂಬುದಕ್ಕೆ ಶ್ರೀಧರ್ ವೆಂಬು ಅವರ ಈ ‘ಕರುವಿ’ ಸ್ಟಾರ್ಟ್-ಅಪ್ ಇಂದಿನ ಯುವ ಪೀಳಿಗೆಗೆ ಪ್ರಮುಖ ಉದಾಹರಣೆಯಾಗಿದೆ.

ಹೆಚ್ಚಿನ ಸುದ್ದಿ

Change Language »
error: Content is protected !!