ಯುಗಾದಿಯ ಹಬ್ಬದ ಮಾರನೆಯ ದಿನ ರಾಜ್ಯಾದ್ಯಂತ ಹೊಸ ತಡುಕಿನ ಸಂಭ್ರಮ. ಮಾಂಸಪ್ರಿಯರು ಬೆಳಗ್ಗೆಯೇ ಮಾಂಸದಂಗಡಿಗಳ ಮುಂದೆ ಸಾಲುಗಟ್ಟಿ ನಿಂತಿರುವ ದೃಶ್ಯಗಳು ಬೆಂಗಳೂರಿನಲ್ಲಿ ಮಾತ್ರವಲ್ಲ ಹಳ್ಳಿಗಳಲ್ಲೂ ಸಹ ಮಾಮೂಲಿ. ಇಂದು ಮನೆಯ ಹೆಂಗಸರಿಗೆ ವಿವಿಧ ಮಾಂಸದ ಭಕ್ಷ್ಯಗಳನ್ನು ಮಾಡುವ ಉತ್ಸಾಹವಾದರೆ, ಪುರುಷರಿಗೆ ಭರ್ಜರಿ ಬ್ಯಾಂಟಿಗ್ ಮಾಡುವುದೇ ಕೆಲಸ.
ಯುಗಾದಿ ಹೊಸ ತೊಡಕು ಗುರುವಾರ ಬಂದಿರುವ ಕಾರಣ, ಮಾಂಸಪ್ರಿಯರ ನಾಲಿಗೆ ರುಚಿಗೆ ಕೊಂಚ ಕಡಿವಾಣ ಹಾಕಿದಂತಾಗಿದೆ ಎಂದು ಮಾಂಸದಂಗಡಿ ಮಾಲಿಕರು ನುಡಿದಿದ್ದಾರೆ. ಹಾಗೆಂದು ವ್ಯಾಪಾರಕ್ಕೆ ಯಾವ ಅಡ್ಡಿಯೂ ಇಲ್ಲ. ಬೆಂಗಳೂರಿನ ಎಲ್ಲಾ ಮಾಂಸದಂಗಡಿಗಳಲ್ಲೂ ವ್ಯಾಪಾರ ಭರ್ಜರಿಯಾಗಿದೆ.
ಮಟನ್ ಪ್ರತಿ ಕೆಜಿಗೆ 800 ರೂಪಾಯಿ ಆಗಿದ್ದರೆ, ಚಿಕನ್ ಪ್ರತಿ ಕೆಜಿಗೆ 300 ರೂ. ಆಸುಪಾಸಿನಲ್ಲಿದೆ. ಗ್ರಾಮೀಣ ಮಂದಿಗೆ ಮಾಂಸದ ಬೆಲೆ ಹೆಚ್ಚಳ ಯಾವ ಪರಿಣಾಮ ಬೀರದಿದ್ದರೂ, ನಗರವಾಸಿಗಳ ಮೇಲೆ ಪರಿಣಾಮ ಬೀರುವುದಂತೂ ಖಂಡಿತಾ. ಹೀಗಾಗಿ ಎಷ್ಟೋ ಮಂದಿ ಗುಡ್ಡೆ ಮಾಂಸ ಎಂಬ ಪರಿಕಲ್ಪನೆಯನ್ನು ನೆಚ್ಚಿಕೊಂಡಿರುವುದೂ ಉಂಟು. ಜೊತೆಗೆ ಮಾಂಸದ ಚೀಟಿ ಮುಂತಾದ ಉಪಾಯಗಳ ಮೂಲಕ ತಮ್ಮ ಜಿಹ್ವಾಚಾಪಲ್ಯವನ್ನು ತಣಿಸಿಕೊಳ್ಳುತ್ತಿದ್ದಾರೆ.
ಮಾಂಸದೊಡನೆ ಮದ್ಯಸೇವನೆಯೂ ಸಹ ಸರ್ವೇಸಾಮಾನ್ಯವಾಗಿರುವುದರಿಂದ ಪ್ರತಿಯೊಂದು ಬಾರ್‍ಗಳೂ, ಎಂಎಸ್‍ಐಎಲ್ ಕೇಂದ್ರಗಳೂ, ಮತ್ತು ಎಂಆರ್‍ಪಿ ಸೆಂಟರ್‍ಗಳೂ ಸಹ ತುಂಬಿತುಳುಕುತ್ತಿದೆ.
ಒಟ್ಟಾರೆಯಾಗಿ ಕೋವಿಡ್ ಭೀತಿಯಾಗಲೀ, ಹಲಾಲ್ ವಿವಾದವನ್ನಾಗಲೀ ತಲೆಗೆ ಹಚ್ಚಿಕೊಳ್ಳದ ಜನ ಸಂಪೂರ್ಣವಾಗಿ ಹೊಸತೊಡಕಿನ ಸಂಭ್ರಮಾಚರಣೆಯಲ್ಲಿ ತೊಡಗಿಕೊಂಡಿದ್ದಾರೆ.