Thursday, July 16, 2026
Homeಟಾಪ್ ನ್ಯೂಸ್BOMBAY HIGH COURT: ನಿನ್ನ ಜೀವನ, ನಿನ್ನಿಷ್ಟ - ಮದುವೆ ಮುರಿದು ಬಂದ ಯುವತಿಗೆ ಕೋರ್ಟ್...

BOMBAY HIGH COURT: ನಿನ್ನ ಜೀವನ, ನಿನ್ನಿಷ್ಟ – ಮದುವೆ ಮುರಿದು ಬಂದ ಯುವತಿಗೆ ಕೋರ್ಟ್ ಅಭಯ!

ಮುಂಬೈ: ಮೇಜರ್ ಆಗಿರುವ ಮಹಿಳೆಗೆ(Woman) ತಾನು ಎಲ್ಲಿ ವಾಸಿಸಬೇಕು, ಯಾರನ್ನು ಮದುವೆಯಾಗಬೇಕು ಮತ್ತು ಏನು ಓದಬೇಕು ಎಂಬುದನ್ನು ನಿರ್ಧರಿಸುವ ಸಂಪೂರ್ಣ ಕಾನೂನಾತ್ಮಕ ಹಕ್ಕಿದೆ” ಎಂದು ಬಾಂಬೆ ಹೈಕೋರ್ಟ್(Bombay High Court) ಮಹತ್ವದ ತೀರ್ಪು ನೀಡಿದೆ. ಆ ಮೂಲಕ ಹೆತ್ತವರ ಬಲವಂತದ ಮದುವೆಯ ಪಾಶದಿಂದ ತಪ್ಪಿಸಿಕೊಂಡು ಬಂದಿದ್ದ 21 ವರ್ಷದ ಯುವತಿಯ ನೆರವಿಗೆ ಧಾವಿಸಿರುವ ನ್ಯಾಯಾಲಯ, ಆಕೆಯ ವೈಯಕ್ತಿಕ ಸ್ವಾತಂತ್ರ್ಯವನ್ನು ಎತ್ತಿಹಿಡಿದಿದೆ.

ಘಟನೆಯ ಹಿನ್ನೆಲೆ: ಓದುವ ಆಸೆಗೆ ತಣ್ಣೀರೆರಚಿದ್ದ ಕುಟುಂಬ!
ಮೂಲತಃ ತೆಲಂಗಾಣದ ಈ ಯುವತಿಗೆ ಆಕೆಯ ಕುಟುಂಬಸ್ಥರು ತನಗಿಂತ ಹತ್ತು ವರ್ಷ ದೊಡ್ಡವನಾದ ಸೋದರಸಂಬಂಧಿಯೊಂದಿಗೆ ಬಲವಂತವಾಗಿ ಮದುವೆ ಮಾಡಲು ಮುಂದಾಗಿದ್ದರು. ಆದರೆ, ಯುವತಿಗೆ ಉನ್ನತ ಶಿಕ್ಷಣ ಪಡೆದು, ಆರ್ಥಿಕವಾಗಿ ಸ್ವಾವಲಂಬಿಯಾಗುವ ದೊಡ್ಡ ಕನಸಿತ್ತು. ಸಂಪ್ರದಾಯವಾದಿ ಕುಟುಂಬವು ಆಕೆಯ ಓದಿಗೆ ಕಡು ವಿರೋಧ ವ್ಯಕ್ತಪಡಿಸಿ, ಮದುವೆಗೆ ಒತ್ತಾಯಿಸಿದಾಗ ತನ್ನ ಭವಿಷ್ಯವನ್ನು ರಕ್ಷಿಸಿಕೊಳ್ಳಲು ಆಕೆ ಮನೆಯಿಂದ ಮಹಾರಾಷ್ಟ್ರಕ್ಕೆ ಓಡಿಬಂದಿದ್ದಳು.

ಯುವತಿ ನಾಪತ್ತೆಯಾದ ಬೆನ್ನಲ್ಲೇ ಆಕೆಯ ಪೋಷಕರು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ‘ಮಿಸ್ಸಿಂಗ್ ಕೇಸ್’ (ಕಾಣೆಯಾಗಿದ್ದಾರೆ) ದಾಖಲಿಸಿದ್ದರು. ತನ್ನ ಕುಟುಂಬ ಮತ್ತು ಸಮುದಾಯದವರು ತನ್ನನ್ನು ಹುಡುಕಿಕೊಂಡು ಬಂದು, ಪೊಲೀಸರ ಸಹಾಯದಿಂದ ಮತ್ತೆ ಬಲವಂತವಾಗಿ ಮನೆಗೆ ಕರೆದೊಯ್ಯಬಹುದು ಎಂಬ ತೀವ್ರ ಭೀತಿಯಲ್ಲಿದ್ದ ಯುವತಿ, ತನಗೆ ತುರ್ತು ರಕ್ಷಣೆ ನೀಡುವಂತೆ ಕೋರಿ ಹಿರಿಯ ವಕೀಲ ಮಿಹಿರ್ ದೇಸಾಯಿ ಅವರ ಮೂಲಕ ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ್ದಳು. ಯಾವುದೇ ಕಾರಣಕ್ಕೂ ಮಹಾರಾಷ್ಟ್ರ ಮತ್ತು ತೆಲಂಗಾಣ ಪೊಲೀಸರು ತನ್ನನ್ನು ಮರಳಿ ಕಳುಹಿಸದಂತೆ ತಡೆಯಲು ಆಕೆ ಕೋರಿದ್ದಳು.

ಚೇಂಬರ್‌ನಲ್ಲಿ ಯುವತಿಯ ಅಳಲು ಆಲಿಸಿದ ನ್ಯಾಯಾಧೀಶರು
ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದ ಹೈಕೋರ್ಟ್ ನ್ಯಾಯಾಧೀಶರು, ಯುವತಿಯನ್ನು ತಮ್ಮ ಖಾಸಗಿ ಚೇಂಬರ್‌ಗೆ (ಕೊಠಡಿ) ಕರೆಸಿಕೊಂಡು ಆಕೆಯ ಅಸಲಿ ಪರಿಸ್ಥಿತಿಯನ್ನು ಅರಿತುಕೊಂಡರು. ಈ ವೇಳೆ ಆಕೆ ಅತ್ಯಂತ ಪ್ರಬುದ್ಧತೆಯಿಂದ, ಸ್ಪಷ್ಟವಾಗಿ ತನ್ನ ನಿರ್ಧಾರಗಳನ್ನು ಮತ್ತು ಭವಿಷ್ಯದ ಕನಸುಗಳನ್ನು ನ್ಯಾಯಾಲಯದ ಮುಂದೆ ತೆರೆದಿಟ್ಟಳು. ಕೋರ್ಟ್‌ನಲ್ಲಿ ಆಕೆಯ ದತ್ತಿ ಪೋಷಕರು (Adoptive Parents) ನಾವು ಮದುವೆಗೆ ಬಲವಂತ ಮಾಡುವುದಿಲ್ಲ ಎಂದು ಹೇಳಿದರೂ, ಆಕೆ ಮಾತ್ರ ಯಾವುದೇ ಕಾರಣಕ್ಕೂ ಮರಳಿ ಮನೆಗೆ ಹೋಗುವುದಿಲ್ಲ ಎಂದು ದೃಢವಾಗಿ ನಿರಾಕರಿಸಿದಳು. ಆದರೆ, ತಾನು ಸುರಕ್ಷಿತವಾಗಿದ್ದೇನೆ ಎಂಬುದನ್ನು ಪೋಷಕರಿಗೆ ತಿಳಿಸಲು ಅವರೊಂದಿಗೆ ನಿರಂತರ ಸಂಪರ್ಕದಲ್ಲಿರುವುದಾಗಿ ನ್ಯಾಯಾಲಯಕ್ಕೆ ಭರವಸೆ ನೀಡಿದಳು.

ಸಂವಿಧಾನದ 21ನೇ ವಿಧಿ ನೆನಪಿಸಿದ ಹೈಕೋರ್ಟ್!
ಅಂತಿಮವಾಗಿ ತೀರ್ಪು ಪ್ರಕಟಿಸಿದ ನ್ಯಾಯಾಲಯ, ಯುವತಿಯು ಕಾನೂನುಬದ್ಧವಾಗಿ ವಯಸ್ಕಳಾಗಿರುವುದರಿಂದ ಆಕೆಯ ಇಚ್ಛೆಗೆ ವಿರುದ್ಧವಾಗಿ ಮನೆಗೆ ಮರಳುವಂತೆ ಒತ್ತಾಯಿಸಲು ಪೋಷಕರಿಗಾಗಲಿ ಅಥವಾ ಸರ್ಕಾರಕ್ಕಾಗಲಿ ಯಾವುದೇ ಹಕ್ಕಿಲ್ಲ ಎಂದು ಸ್ಪಷ್ಟಪಡಿಸಿತು.

“ಇಂತಹ ವೈಯಕ್ತಿಕ ಆಯ್ಕೆಗಳು ಭಾರತೀಯ ಸಂವಿಧಾನದ 21ನೇ ವಿಧಿಯಡಿ (Article 21) ಖಾತರಿಪಡಿಸಲಾದ ಜೀವಿಸುವ ಮತ್ತು ವೈಯಕ್ತಿಕ ಸ್ವಾತಂತ್ರ್ಯದ ಹಕ್ಕಿನ ಅಡಿಯಲ್ಲಿ ಸಂಪೂರ್ಣವಾಗಿ ಸಂರಕ್ಷಿಸಲ್ಪಟ್ಟಿವೆ” ಎಂದು ನ್ಯಾಯಾಧೀಶರು ಅಭಿಪ್ರಾಯಪಟ್ಟರು. ಇದೇ ವೇಳೆ, ತೆಲಂಗಾಣ ಪೊಲೀಸರು ದಾಖಲಿಸಿಕೊಂಡಿರುವ ‘ಮಿಸ್ಸಿಂಗ್ ಕೇಸ್’ ಅನ್ನು ತಕ್ಷಣವೇ ಮುಕ್ತಾಯಗೊಳಿಸುವಂತೆ ಅಧಿಕೃತ ಆದೇಶ ನೀಡಿದ ಹೈಕೋರ್ಟ್, ಕ್ರಿಮಿನಲ್ ಬೆದರಿಕೆ ಅಥವಾ ಒತ್ತಡವನ್ನು ಬಳಸಿ ಯುವತಿಯನ್ನು ಮರಳಿ ಕರೆದೊಯ್ಯಲು ಯಾರಿಗೂ ಅವಕಾಶವಿಲ್ಲ ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದೆ.

ಇದನ್ನೂ ಓದಿ : ದೇಶದಲ್ಲಿ ವಿಧ್ವಂಸಕ ಕೃತ್ಯಕ್ಕೆ ಸಂಚು- ಕರ್ನಾಟಕ ಸೇರಿ ದೇಶಾದ್ಯಂತ ಎನ್‌ಐಎ ಅಧಿಕಾರಿಗಳಿಂದ ಏಕಕಾಲಕ್ಕೆ ದಾಳಿ!

ಹೆಚ್ಚಿನ ಸುದ್ದಿ

Change Language »
error: Content is protected !!