ಚುನಾವಣೆ ಹತ್ತಿರಗೊಳ್ಳುತ್ತಿದ್ದಂತೆ ಬಿಜೆಪಿಯೊಳಗಿನ ಮುಸುಕಿನ ಗುದ್ದಾಟ ಮುಸುಕು ಕಳಚಿ ಕಣ್ಣಿಗೆ ರಾಚುತ್ತಿದೆ. ಬಿಎಸ್‌ವೈ ಮತ್ತು ವಿಜಯೇಂದ್ರ ತನ್ನ ಹಾಗೂ ತನ್ನ ಮಗನ ಏಳಿಗೆಗೆ ಅಡ್ಡಿಯಾಗುತ್ತಿದ್ದಾರೆ, ಬೇರೆ ಲಿಂಗಾಯತ ನಾಯಕರು ಬೆಳೆಯಲು ಅವಕಾಶ ಕೊಡುತ್ತಿಲ್ಲ ಎಂದು ಸೋಮಣ್ಣ ಆರೋಪಿಸಿದ್ದಾರೆ ಎನ್ನಲಾದ ಬೆನ್ನಲ್ಲೇ ಮಲೆ ಮಾದೇಶ್ವರದ ದರ್ಶನಕ್ಕೆ ಬಿಎಸ್‌ವೈ ಗೈರುಹಾಜರಾಗಿದ್ದಾರೆ.
ಮಲೈಮಹದೇಶ್ವರ ಬೆಟ್ಟದಲ್ಲಿರುವ ದೀಪದಗಿರಿ ಒಡ್ಡುವಿನಲ್ಲಿ 108 ಅಡಿ ಎತ್ತರದ ಮಹದೇಶ್ವರಸ್ವಾಮಿ ಪ್ರತಿಮೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅನಾವರಣಗೊಳಿಸಿದ್ದಾರೆ. ಕಾರ್ಯಕ್ರಮದಲ್ಲಿ ಸುತ್ತೂರು ಮಠ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಸಾಲೂರು ಮಠದ ಹಿರಿಯ ಸ್ವಾಮೀಜಿ ಗುರುಸ್ವಾಮಿ, ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ, ಸಹಕಾರ ಸಚಿವ ಎಸ್.ಟಿ.ಸೋಮಶೇಖರ್, ಶಾಸಕರಾದ ಆರ್.ನರೇಂದ್ರ, ಎನ್.ಮಹೇಶ್ ಭಾಗಿಯಾಗಿದ್ದರು. ಆದರೆ ಆಹ್ವಾನ ಇದ್ದರೂ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಗೈರಾಗಿದ್ದರು.
ಚಾಮರಾಜನಗರ ಜಿಲ್ಲೆಯ ಮಲೈ ಮಾದೇಶ್ವರ ಬೆಟ್ಟದ ಅಭಿವೃದ್ಧಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ವಿ ಸೋಮಣ್ಣ ಅವರು ಸಾಕಷ್ಟು ಕೆಲಸ ಮಾಡಿದ್ದಾರೆ, ಅದರ ಹೆಸರು ಸೋಮಣ್ಣರಿಗೆ ಹೋಗುತ್ತದೆ ಎನ್ನುವ ಕಾರಣಕ್ಕೆ ಬಿಎಸ್‌ವೈ ಕಾರ್ಯಕ್ರಮಕ್ಕೆ ಗೈರಾಗಿದ್ದಾರೆ ಎನ್ನಲಾಗಿದೆ.
ಪ್ರತಿಮೆ ಅನಾವರಣದ ಬಳಿಕ ಮಾತನಾಡಿದ ಸಿಎಂ ಬೊಮ್ಮಾಯಿ, ಸಚಿವ ಸೋಮಣ್ಣರನ್ನು ಹಾಡಿಹೊಗಳಿದ್ದು, ಮಹದೇಶ್ವರ ಕ್ಷೇತ್ರದ ಅಭಿವೃದ್ಧಿಗೆ ಸೋಮಣ್ಣ ಕಂಕಣ ಬದ್ಧವಾಗಿ ಕೆಲಸ ಮಾಡುತ್ತಿದ್ದಾರೆ, ಹಲವು ಕಾಮಗಾರಿ ಕೆಲಸಗಳು ಸೋಮಣ್ಣರಿಂದ ಚುರುಕು ಪಡೆದಿದೆ. ಸೋಮಣ್ಣ ಉಸ್ತುವಾರಿ ಸಚಿವರಾದ ನಂತರ ಆಸಕ್ತಿ ವಹಿಸಿ ಕೆಲಸ ಮಾಡಿದ್ದಾರೆ. ಮಲೆ ಮಹದೇಶ್ವರ ಸಂಪೂರ್ಣ ಆಶೀರ್ವಾದ ಸೋಮಣ್ಣರಿಗೆ ಸಿಗುತ್ತದೆ ಎಂದು ಹೇಳಿದ್ದಾರೆ.
ಸೋಮಣ್ಣ ಹಾಗೂ ಬಿಎಸ್‌ವೈ ನಡುವಿನ ಶೀತಲ ಸಮರದ ಕಾರಣಕ್ಕೆ ಬಿಎಸ್‌ವೈ ಮಹದೇಶ್ವರ ಪ್ರತಿಮೆ ಅನಾವರಣ ಕಾರ್ಯಕ್ರಮದಿಂದ ತಪ್ಪಿಸಿಕೊಂಡಿದ್ದಾರೆ ಎನ್ನುವ ಮಾತು ಬಿಜೆಪಿ ವಲಯದಿಂದ ಕೇಳಿ ಬರುತ್ತಿದೆಯಾದರೂ, ಯಡಿಯೂರಪ್ಪ ಅದನ್ನು ನಿರಾಕರಿಸಿದ್ದಾರೆ. ಸೋಮಣ್ಣ- ಬಿಎಸ್‌ವೈ ನಡುವೆ ಮುನಿಸು ಮುಂದುವರೆದಿದೆ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ