ಚಿಕ್ಕಮಗಳೂರು ಜಿಲ್ಲೆಯ ಕಡೂರಿನ ಮಾಜಿ ಶಾಸಕ ವೈ.ಎಸ್.ವಿ ದತ್ತಾ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡದಿರುವ ಬಗ್ಗೆ ಅಭಿಮಾನಿಗಳಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.
ಇತ್ತೀಚೆಗಷ್ಟೇ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ್ದ ವೈಎಸ್‌ವಿ ಕಾಂಗ್ರೆಸ್ ಟಿಕೆಟ್ ನಿರೀಕ್ಷೆಯಲ್ಲಿದ್ದರು. ಆದರೆ ಕೊನೆಯ ಗಳಿಗೆಯಲ್ಲಿ ಆನಂದ್ ಕೆ.ಎಸ್ ಅವರಿಗೆ ಟಿಕೆಟ್ ನೀಡಲಾಗಿದೆ.nಕಾಂಗ್ರೆಸ್ ಟಿಕೆಟ್ ಸಿಗದಿದ್ದರೂ ಪಕ್ಷೇತರರಾಗಿ ನಿಲ್ಲಿ ಎಂದು ದತ್ತಾ ಅವರ ಅಭಿಮಾನಿಗಳು ಆಗ್ರಹಿಸಿದ್ದಾರೆ. ಅಭಿಮಾನಿಗಳು ಕಾಂಗ್ರೆಸ್ ವಿರುದ್ಧ ಆಕ್ರೋಶವೂ ಹೊರ ಹಾಕಿದ್ದಾರೆ.
ಈ ನಡುವೆ ದತ್ತಾ ಅವರು ತಮ್ಮ ಅಭಿಮಾನಿಗಳಿಗೆ ಭಾವುಕ ಪತ್ರವನ್ನು ಬರೆದಿದ್ದಾರೆ. ನೀವು ನನಗೆ ಪ್ರೀತಿಯನ್ನು ಧಾರೆ ಎರೆದಿದ್ದೀರಿ. ಹಣವಿಲ್ಲದ, ಜಾತಿ ಇಲ್ಲದ ನನ್ನನ್ನು ದತ್ತಣ್ಣ, ನಮ್ಮ ದತ್ತಣ್ಣ ಎಂದು ಅಭಿಮಾನದಿಂದ ತಬ್ಬಿಕೊಂಡು ಬೆಳೆದಿದ್ದೀರಿ. ಈಗ ಬಂದಿರುವ ವಿಶೇಷ ರಾಜಕೀಯ ಪರಿಸ್ಥಿತಿಯಲ್ಲಿ ನಿಮ್ಮ ಜೊತೆಗೆ ನಾನಿರಬೇಕು ಹಾಗೂ ನನ್ನ ಜೊತೆಗೆ ನೀವಿರಬೇಕು ಎಂದು ದತ್ತಾ ಅವರು ಪತ್ರ ಬರೆದಿದ್ದಾರೆ.
“ಈ ಕಾರಣದಿಂದ ಇದು ನನ್ನ ಮತ್ತು ನಿಮ್ಮೆಲ್ಲರ ಆತ್ಮಗೌರವಕ್ಕೆ, ಸ್ವಾಭಿಮಾನಕ್ಕೆ ಆದ ಅಪಮಾನ. ಆದ್ದರಿಂದ ಮುಂದಿನ ನಿರ್ಧಾರ ಕೈಗೊಳ್ಳಲು ಕಡೂರು ಪಟ್ಟಣದಲ್ಲಿ ಏಪ್ರಿಲ್ 9ರಂದು ಬೆಳಗ್ಗೆ 11 ಗಂಟೆಗೆ ಅಭಿಮಾನಿಗಳ ಸಭೆಗೆ ಬನ್ನಿ. ನೀವು ಬಂದು ನನಗೆ ಹಾರೈಸಬೇಕು” ಎಂದು ತಮ್ಮ ಅಭಿಮಾನಿಗಳನ್ನು ಆಹ್ವಾನಿಸಿದ್ದಾರೆ.