ಬೆಂಗಳೂರು: ನಾಲ್ವರು ಕಾಮುಕರು ಯುವತಿಯೋರ್ವಳನ್ನು ಅಪಹರಿಸಿ ಚಲಿಸುತ್ತಿರುವ ಕಾರಿನಲ್ಲೇ ಅತ್ಯಾಚಾರ ಎಸಗಿರುವ ಘಟನೆ ವರದಿಯಾಗಿದೆ. ಮಾ. 25ರ ಶನಿವಾರ ರಾತ್ರಿ 10ರ ಸುಮಾರಿಗೆ ನಡೆದಿರುವ ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸತೀಶ್, ವಿಜಯ್, ಶ್ರೀಧರ್ ಮತ್ತು ಕಿರಣ್ ಎಂಬುವವರನ್ನು ಬಂದಿಸಲಾಗಿದೆ.
ಕೋರಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯ ನ್ಯಾಷನಲ್ ಗೇಮ್ಸ್ ವಿಲೇಜ್‍ನಲ್ಲಿ ತನ್ನ ಸ್ನೇಹಿತನೊಡನೆ ಯುವತಿ ಕುಳಿತಿದ್ದಳು. ಈ ವೇಳೆ ಕೆಎ 01 ಎಂಬಿ 6169 ದಾಖಲಾತಿಯ ಕಾರಿನಲ್ಲಿ ಅಲ್ಲಿಗೆ ಮತ್ತೊಬ್ಬ ಸ್ನೇಹಿತ ಬಂದಿದ್ದ. ಈ ವೇಳೆ ಯುವತಿ ಮತ್ತು ಆತನಿಗೆ ಸಣ್ಣ ಮಟ್ಟದ ವಾಗ್ವಾದ ನಡೆದಿದ್ದು. ಯುವತಿಯ ಸ್ನೇಹಿತ ಮನೆಗೆ ತೆರಳಿದ ಬಳಿಕ ವಾಗ್ವಾದ ನಡೆಸಿದ್ದಾತ ತನ್ನ ಮೂವರು ಸ್ನೇಹಿತರನ್ನು ಸ್ಥಳಕ್ಕೆ ಕರೆಸಿದ್ದ. ಬಳಿಕ ಆಕೆಯನ್ನು ಹೊತ್ತೊಯ್ದು ದೊಮ್ಮಲೂರು, ಇಂದಿರಾನಗರ, ನೈಸ್ ರಸ್ತೆ ಸೇರಿದಂತೆ ಹಲವೆಡೆ ಸುತ್ತಾಡಿ, ಚಲಿಸುತ್ತಿರುವ ಕಾರಿನಲ್ಲೇ ಅತ್ಯಾಚಾರವೆಸಗಿದ್ದಾರೆ. ಬಳಿಕ ಬೆಳಗಿನ ಜಾವ ಆಕೆಯನ್ನು ನಡುರಸ್ತೆಯಲ್ಲಿ ಬಿಟ್ಟು ಹೋಗಿದ್ದಾರೆ. ಬಳಿಕ ಯುವತಿ ನೀಡಿದ ದೂರಿನ ಆಧಾರದ ಮೇಲೆ ನಾಲ್ವರನ್ನು ಬಂಧಿಸಲಾಗಿದೆ.