ಬೆಂಗಳೂರು: ಪತಿಯೊಡನೆ ವಿಚ್ಛೇದನ ಪಡೆದು ಸಹಜೀವನ ನಡೆಸುತ್ತಿದ್ದ ಮಹಿಳೆಯನ್ನು ಆಕೆಯ ಪ್ರಿಯಕರನೇ ಕೊಂದು ಶವವನ್ನು ಸುಟ್ಟುಹಾಕಿರುವ ದಾರುಣ ಘಟನೆ ಹೆಬ್ಬಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯ ಅನಂತನಗರ ಬೋವಿಪಾಳ್ಯದಲ್ಲಿ ನಡೆದಿದೆ. ಮಂಜುಳಾ (32) ಮೃತ ದುರ್ದೈವಿಯಾಗಿದ್ದು, ಆರೋಪಿ ನಾರಾಯಣ(42) ಪರಾರಿಯಾಗಿದ್ದಾನೆ.
ವಿಚ್ಛೇದಿತ ಮಹಿಳೆ ಕಳೆದ ಹತ್ತು ವರ್ಷಗಳಿಂದ ನಾರಾಯಣನ ಜೊತೆ ಸಹಜೀವನ ನಡೆಸುತ್ತಿದ್ದಳು. ಅಪಾರ್ಟ್‍ಮೆಂಟ್ ಒಂದರಲ್ಲಿ ಮನೆಗೆಲಸ ಮಾಡುತ್ತಿದ್ದ ಮಂಜುಳಾಳನ್ನು ಕೆಲಸ ಬಿಡುವಂತೆ ನಾರಾಯಣ ಆಗಾಗಲೇ ಒತ್ತಾಯಿಸುತ್ತಿದ್ದ. ಜೊತೆಗೆ ಆಕೆಯ ಮೇಲೆ ಅಕ್ರಮ ಸಂಬಂಧದ ಆರೋಪ ಹೊರೆಸಿ ಜಗಳವಾಡುತ್ತಿದ್ದ. ಮಾ. 29 ರಂದು ಆಕೆಯನ್ನು ಮಾತಾಡುವ ನೆಪದಲ್ಲಿ ಏಕಾಂತ ಸ್ಥಳವೊಂದಕ್ಕೆ ಕರೆಸಿ ಆಕೆಯನ್ನು ಕೊಂದು ಶವವನ್ನು ಸುಟ್ಟುಹಾಕಿದ್ದಾನೆ.
ಸ್ಥಳದಲ್ಲಿ ತಲೆಬುರುಡೆ ಮತ್ತು ಬೆನ್ನುಮೂಳೆ ಮಾತ್ರ ಪತ್ತೆಯಾಗಿದ್ದು, ಉಳಿದಂತೆ ಇಡೀ ಶವ ಸುಟ್ಟು ಬೂಧಿಯಾಗಿದೆ. ಸ್ಥಳಕ್ಕೆ ಭೇಟಿ ನೀಡಿ ತನಿಖೆ ಪ್ರಾರಂಭಿಸಿರುವ ಪೊಲೀಸರು ಆರೋಪಿ ಪತ್ತೆಗೆ ಬಲೆ ಬೀಸಿದ್ದಾರೆ.