Saturday, May 16, 2026
Homeಟಾಪ್ ನ್ಯೂಸ್GRUHALAKSHMI SCHEME: ಗೃಹಲಕ್ಷ್ಮಿ ಯೋಜನೆ ಹಣದಿಂದ ಐಸ್‌ಕ್ರೀಮ್‌ ಅಂಗಡಿ ತೆರೆದ ಯಜಮಾನಿ

GRUHALAKSHMI SCHEME: ಗೃಹಲಕ್ಷ್ಮಿ ಯೋಜನೆ ಹಣದಿಂದ ಐಸ್‌ಕ್ರೀಮ್‌ ಅಂಗಡಿ ತೆರೆದ ಯಜಮಾನಿ

ಬಳ್ಳಾರಿ: ಸರ್ಕಾರದ ಗೃಹಲಕ್ಷ್ಮಿ ಯೋಜನೆಯಡಿ (Gruhalakshmi Scheme) ಬರುವ ಹಣವನ್ನು (Money) ವ್ಯರ್ಥ ಮಾಡದೆ, ಅದನ್ನು ಸದುಪಯೋಗ ಪಡಿಸಿಕೊಂಡು ಮಹಿಳೆಯೊಬ್ಬರು ಸ್ವಾವಲಂಬಿ ಬದುಕು ಕಟ್ಟಿಕೊಂಡಿರುವ ಸ್ಫೂರ್ತಿದಾಯಕ ಘಟನೆ ವಿಜಯನಗರ (Vijayanagara) ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.

ಕೊಟ್ಟೂರು ತಾಲೂಕಿನ ಹರಾಳು ಗ್ರಾಮದ ಎನ್. ವಿಶಾಲಾಕ್ಷಿ ಎಂಬುವವರೇ ಈ ಸಾಧನೆ ಮಾಡಿದ ಮಹಿಳೆ. ತಾವು ಪ್ರತಿ ತಿಂಗಳು ಪಡೆಯುತ್ತಿದ್ದ 2,000 ರೂಪಾಯಿಗಳನ್ನು ಕೂಡಿಟ್ಟು ಇಂದು ಸ್ವಂತ ಐಸ್‌ಕ್ರೀಮ್‌ ಅಂಗಡಿ ಆರಂಭಿಸುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಮಧ್ಯಮ ವರ್ಗದ ಕುಟುಂಬಕ್ಕೆ ಸೇರಿದ ವಿಶಾಲಾಕ್ಷಿ ಅವರು ಈ ಹಿಂದೆ ದಿನಗೂಲಿ ಕೆಲಸಕ್ಕೆ ಹೋಗುತ್ತಿದ್ದರು. ಆದರೆ ತಮಗೆ ಸಿಗುವ ಸರ್ಕಾರಿ ಸವಲತ್ತನ್ನು ಬಂಡವಾಳವನ್ನಾಗಿ ಮಾಡಿಕೊಳ್ಳಲು ನಿರ್ಧರಿಸಿದ ಅವರು, ಕಳೆದ ಹಲವು ತಿಂಗಳಿಂದ ಬ್ಯಾಂಕ್ ಖಾತೆಗೆ ಜಮೆಯಾಗುತ್ತಿದ್ದ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಕಿಂಚಿತ್ತೂ ಖರ್ಚು ಮಾಡದೆ ಉಳಿಸಿದ್ದರು. ಈ ಉಳಿತಾಯದ ಹಣದ ಜೊತೆಗೆ ತಮ್ಮ ಪತಿ ಎನ್. ಬಸವರಾಜ ಅವರ ಸಹಕಾರವನ್ನು ಪಡೆದು ಗ್ರಾಮದಲ್ಲಿಯೇ ಸಣ್ಣದೊಂದು ಐಸ್‌ಕ್ರೀಮ್‌ ಮಳಿಗೆಯನ್ನು ತೆರೆದಿದ್ದಾರೆ.

ಸದ್ಯ ಈ ಭಾಗದಲ್ಲಿ ಬಿಸಿಲಿನ ತಾಪ ಹೆಚ್ಚಾಗಿರುವುದರಿಂದ ವಿಶಾಲಾಕ್ಷಿ ಅವರ ಅಂಗಡಿಗೆ ಗ್ರಾಹಕರಿಂದ ಉತ್ತಮ ಸ್ಪಂದನೆ ಸಿಗುತ್ತಿದೆ. ಮಕ್ಕಳಿಂದ ಹಿಡಿದು ಹಿರಿಯರವರೆಗೆ ಎಲ್ಲರೂ ಬಂದು ಚಾಕೋಬಾರ್, ಕುಲ್ಫಿ, ಕೋನ್ ಐಸ್‌ಕ್ರೀಮ್‌ಗಳನ್ನು ಸವಿಯುತ್ತಿದ್ದಾರೆ. ಇದರೊಂದಿಗೆ ತಂಪು ಪಾನೀಯಗಳನ್ನೂ ಮಾರಾಟ ಮಾಡುತ್ತಿರುವುದರಿಂದ ನಿತ್ಯ ಉತ್ತಮ ವಹಿವಾಟು ನಡೆಯುತ್ತಿದೆ.

“ಕೂಲಿ ಕೆಲಸ ನಂಬಿಕೊಂಡಿದ್ದ ನಮಗೆ ಈ ಯೋಜನೆ ವರದಾನವಾಗಿದೆ. ಸರ್ಕಾರ ನೀಡಿದ ಹಣದಿಂದಲೇ ನಾವು ಇಂದು ಸ್ವಂತ ಉದ್ಯೋಗ ಆರಂಭಿಸಿದ್ದೇವೆ” ಎಂದು ವಿಶಾಲಾಕ್ಷಿ ಅವರು ಕೃತಜ್ಞತೆ ಸಲ್ಲಿಸಿದ್ದಾರೆ. ಉಚಿತವಾಗಿ ಬರುವ ಹಣವನ್ನು ಅತೀ ಅವಶ್ಯಕ ಕೆಲಸಗಳಿಗೆ ಅಥವಾ ಇಂತಹ ಸ್ವಯಂ ಉದ್ಯೋಗಕ್ಕೆ ಬಳಸಿಕೊಂಡರೆ ಬದುಕು ಹಸನಾಗುತ್ತದೆ ಎಂಬುದಕ್ಕೆ ವಿಶಾಲಾಕ್ಷಿ ಅವರೇ ಈಗ ಸಾಕ್ಷಿಯಾಗಿದ್ದಾರೆ.

ಇದನ್ನೂ ಓದಿ : ಮಹಿಳೆಯರ ಹಕ್ಕು ಕಸಿದ ವಿಪಕ್ಷಗಳಿಗೆ ಜನರೇ ಪಾಠ ಕಲಿಸುತ್ತಾರೆ: ಅಮಿತ್ ಶಾ ಆಕ್ರೋಶ

ಹೆಚ್ಚಿನ ಸುದ್ದಿ

Change Language »
error: Content is protected !!