ಪಾಟ್ನಾ: ಉತ್ತರ ಪ್ರದೇಶದ ಮಹಾ ಕುಂಭಮೇಳದಿಂದ ನಾಪತ್ತೆಯಾಗಿದ್ದ ಬಿಹಾರದ ಮಹಿಳೆಯೊಬ್ಬರು 15 ದಿನಗಳ ನಂತರ ಜಾರ್ಖಂಡ್‌ನಲ್ಲಿ ಪತ್ತೆಯಾಗಿದ್ದಾರೆ. ಸಾಮಾಜಿಕ ಜಾಲತಾಣದ ಸಹಾಯದಿಂದ ಮಹಿಳೆ ವಾಪಸ್ ತಮ್ಮ ಕುಟುಂಬವನ್ನು ಸೇರಲು ಸಾಧ್ಯವಾಗಿದೆ.
ಬಿಹಾರದ ರೋಹ್ತಾಸ್ ಜಿಲ್ಲೆಯ ನಿವಾಸಿ ಲಖ್‌ಪತೋ ದೇವಿ ಫೆಬ್ರವರಿ 23 ರಂದು ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆದ ಮಹಾ ಕುಂಭಕ್ಕೆ ತನ್ನ ಕುಟುಂಬದೊಂದಿಗೆ ಪ್ರಯಾಣಿಸಿದ್ದರು. ಭಾರೀ ಜನದಟ್ಟಣೆ ಇದ್ದಿದ್ದರಿಂದ ಮಹಿಳೆ ತನ್ನ ಕುಟುಂಬದಿಂದ ಬೇರ್ಪಟ್ಟಿದ್ದರು. ಆಕೆಯ ಕುಟುಂಬಸ್ಥರು ಎರಡು ದಿನಗಳ ಕಾಲ ಎಲ್ಲೆಡೆ ಹುಡುಕಾಟ ನಡೆಸಿದರೂ ಲಖ್‌ಪತೋ ದೇವಿಯ ಸುಳಿವು ಮಾತ್ರ ಸಿಕ್ಕಿಲ್ಲ. ಈ ಹಿನ್ನೆಲೆ ಆಕೆಯ ಕುಟುಂಬಸ್ಥರು ವಾಪಸ್ ತಮ್ಮ ಮನೆಗೆ ಮರಳಬೇಕಾಯಿತು.
ಇದಾದ 15 ದಿನಗಳ ಬಳಿಕ ಮಾರ್ಚ್ 10 ರಂದು, ಲಖ್‌ಪತೋ ದೇವಿ ಜಾರ್ಖಂಡ್‌ನ ಗರ್ವಾ ಜಿಲ್ಲೆಯಲ್ಲಿ ಪತ್ತೆಯಾಗಿದ್ದಾರೆ. ಇದು ಪ್ರಯಾಗ್‌ರಾಜ್‌ನಿಂದ ಬರೋಬ್ಬರಿ 310 ಕಿ.ಮೀ ಹಾಗೂ ರೋಹ್ತಾಸ್‌ನಿಂದ 110 ಕಿ.ಮೀ ದೂರದಲ್ಲಿದೆ. ಬಹಿಯಾರ್ ಖುರ್ದ್ ಗ್ರಾಮದ ಸರಪಂಚ ಸೋನಿ ದೇವಿ ಅವರ ಪ್ರಯತ್ನದಿಂದ ಮಹಿಳೆ ತನ್ನ ಕುಟುಂಬವನ್ನು ವಾಪಸ್ ಸೇರುವಲ್ಲಿ ಯಶಸ್ವಿಯಾಗಿದ್ದಾರೆ.
ಸೋನಿ ದೇವಿ ಅವರ ಪತಿ ವೀರೇಂದ್ರ ಬೈತಾ ಅವರ ಪ್ರಕಾರ, ಮಹಿಳೆ ಗೊಂದಲಮಯ ಸ್ಥಿತಿಯಲ್ಲಿ ಗರ್ಹ್ವಾಗೆ ಬಂದಿದ್ದರು. ಅವರು ದಿಗ್ಭ್ರಮೆಗೊಂಡಂತೆ ಕಂಡುಬಂದರು. ತಾನು ಪ್ರಯಾಗರಾಜ್‌ನಿಂದ ಜಾರ್ಖಂಡ್‌ಗೆ ಬಂದಿದ್ದಾದರೂ ಹೇಗೆ ಎಂಬ ವಿಚಾರವನ್ನು ಕೂಡಾ ನೆನಪಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಅಸಹಾಯಕ ಸ್ಥಿತಿಯಲ್ಲಿದ್ದ ಮಹಿಳೆಗೆ ನನ್ನ ಪತ್ನಿ ಸೋನಿ ದೇವಿ ಆಶ್ರಯ ನೀಡಿದಳು. ಆಕೆಗೆ ಆಹಾರ ಮತ್ತು ಉಳಿಯಲು ಸ್ಥಳವನ್ನು ನೀಡಿದಳು ಎಂದು ಹೇಳಿದ್ದಾರೆ.
ಇದಾದ ನಂತರ ಮಹಿಳೆ ಬೇರೆ ರಾಜ್ಯದಿಂದ ಕಾಣೆಯಾಗಿರಬಹುದು ಎಂದು ಅರಿತ ದಂಪತಿ ಆಕೆಯ ಕುಟುಂಬವನ್ನು ಪತ್ತೆ ಹಚ್ಚಲು ಸಾಮಾಜಿಕ ಜಾಲತಾಣಗಳನ್ನು ಬಳಸಿದ್ದಾರೆ. ಆಕೆಯ ಫೋಟೋ ಹಾಗೂ ವಿವರಗಳನ್ನು ಹಂಚಿಕೊಂಡು ಆಕೆಯ ಯಾರಾದರೂ ಪರಿಚಯಸ್ಥರು ಇದನ್ನು ಗುರುತಿಸಬಹುದು ಎಂಬ ಭರವಸೆಯಲ್ಲಿದ್ದರು.
15 ದಿನಗಳ ಬಳಿಕ ಲಖ್‌ಪತೋ ದೇವಿ ಅವರ ಮಗ ರಾಹುಲ್ ಕುಮಾರ್ ವೈರಲ್ ಪೋಸ್ಟ್ ಅನ್ನು ಗಮನಿಸಿದ್ದಾರೆ. ತಕ್ಷಣ ಗರ್ಹ್ವಾಗೆ ಪ್ರಯಾಣಿಸಿ, ತಮ್ಮ ತಾಯಿಯನ್ನು ಗುರುತಿಸಿದ್ದಾರೆ. ಆಕೆಯ ಗುರುತನ್ನು ದೃಢಪಡಿಸಿದ ನಂತರ ರಾಹುಲ್ ಕುಮಾರ್ ತನ್ನ ತಾಯಿಯನ್ನು ಮನೆಗೆ ಕರೆತಂದಿದ್ದಾರೆ.