ನವದೆಹಲಿ: ಇನ್ ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಒಂದನ್ನು ನೋಡಿ ಕೆಲಸಕ್ಕಾಗಿ ಅಪ್ಲೈ ಮಾಡಿದ ಮಹಿಳೆಯೊಬ್ಬರು 8.6 ಲಕ್ಷ ರೂಪಾಯಿಗಳನ್ನು ಕಳೆದುಕೊಂಡ ಘಟನೆ ನಡೆದಿದೆ. ದೆಹಲಿ ಮೂಲದ ಮಹಿಳೆ ಪೋಸ್ಟ್ ನೋಡಿ ಅಪ್ಲೈ ಮಾಡಿ ಕೆಲಸ ಸಿಗುವ ನಿರೀಕ್ಷೆಯಲ್ಲಿದ್ದರು. ಆದರೆ ನಡೆದದ್ದೇ ಬೇರೆ.
ವಂಚನೆ ನಡೆದದ್ದು ಹೇಗೆ?
2022 ಡಿಸೆಂಬರ್ ನಲ್ಲಿ ಮಹಿಳೆ ಇನ್ ಸ್ಟಾಗ್ರಾಂ ಪೋಸ್ಟ್ ನೋಡಿದ್ದರು. ಅದರಲ್ಲಿ ಕೆಲಸ ಬೇಕಾದರೆ ಕ್ಲಿಕ್ ಮಾಡಿ ಎಂದು ಬರೆದಿತ್ತು. ಲಿಂಕ್ ಕ್ಲಿಕ್ ಮಾಡಿದ ಬಳಿಕ airlinejoballindia ಎನ್ನುವ ಐಡಿಗೆ ರಿಡೈರೆಕ್ಟ್ ಆಗಿದೆ. ಅಲ್ಲಿ ಅರ್ಜಿದಾರರ ಮಾಹಿತಿ ಭರ್ತಿ ಮಾಡಲು ಫಾರಂ ಇತ್ತು. ಕೆಲಸ ಸಿಗಬಹುದು ಎಂದು ನಂಬಿದ ಮಹಿಳೆ ತನ್ನೆಲ್ಲಾ ವೈಯಕ್ತಿಕ ಮಾಹಿತಿಗಳನ್ನು ಅದರಲ್ಲಿ ಬರೆದಿದ್ದಾರೆ. ಆನಂತರ ಆಕೆಗೆ ರಾಹುಲ್ ಎಂಬ ವ್ಯಕ್ತಿಯಿಂದ ಕರೆ ಬಂದಿದೆ.
ನೋಂದಣಿ ಶುಲ್ಕವಾಗಿ 750 ರೂಪಾಯಿ ಪಾವತಿಸಲು ವಂಚಕ ಸಂತ್ರಸ್ತ ಮಹಿಳೆಗೆ ಹೇಳಿದ್ದ. ಇದಾದ ಬಳಿಕ ‘ಗೇಟ್ ಪಾಸ್ ಶುಲ್ಕ, ವಿಮೆ, ಭದ್ರತೆ ಹಣ’ ಎಂದು ತನ್ನ ಖಾತೆಗೆ 8.6 ಲಕ್ಷ ರೂಪಾಯಿಗೂ ಹೆಚ್ಚು ಹಣ ವರ್ಗಾವಣೆ ಮಾಡಿಸಿಕೊಂಡಿದ್ದಾನೆ. ವಂಚಕ ರಾಹುಲ್ ಹೆಚ್ಚಿನ ಹಣವನ್ನು ಕೇಳುವುದನ್ನು ಮುಂದುವರಿಸಿದ ನಂತರ, ಮಹಿಳೆ ಏನೋ ತಪ್ಪಾಗಿದೆ ಎಂದು ಗ್ರಹಿಸಿದರು. ನಂತರ ಮಹಿಳೆಯ ಪತಿ ಪೊಲೀಸರಿಗೆ ದೂರು ನೀಡಿದ್ದಾರೆ.
ಇದೀಗ ಆರೋಪಿಯನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. “ತನಿಖೆಯ ಸಮಯದಲ್ಲಿ, ಹರಿಯಾಣದ ಹಿಸಾರ್‌ನಿಂದ ವಂಚನೆ ನಡೆದಿದೆ ಎನ್ನುವುದು ತಿಳಿದು ಬಂದಿತ್ತು. ಆರೋಪಿಯ ಮೊಬೈಲ್ ಫೋನ್ ಲೊಕೇಶನ್ ಅದೇ ರಾಜ್ಯದಲ್ಲಿತ್ತು. ನಂತರ ಪೊಲೀಸ್ ತಂಡ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದೆ. ಕೋವಿಡ್-19 ಸಾಂಕ್ರಾಮಿಕ ಸಮಯದಲ್ಲಿ ಕೆಲಸ ಕಳೆದುಕೊಂಡ ನಂತರ ಜನರನ್ನು ವಂಚಿಸಲು ಪ್ರಾರಂಭಿಸಿದ್ದಾಗಿ ಆರೋಪಿ ಪೊಲೀಸರ ಬಳಿ ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ.