ವಾಷಿಂಗ್ಟನ್: ಬುಧವಾರ ಮಿನ್ನಿಯಾಪೋಲಿಸ್‌ನಲ್ಲಿ ವಲಸೆ ಮತ್ತು ಕಸ್ಟಮ್ಸ್ ಜಾರಿ (ICE) ಅಧಿಕಾರಿಯೊಬ್ಬರು 37 ವರ್ಷದ ಮಹಿಳೆಯನ್ನು ಗುಂಡಿಕ್ಕಿ ಕೊಂದ ಬಳಿಕ ಅಮೆರಿಕದಾದ್ಯಂತ (America) ಪ್ರತಿಭಟನೆ ಗಿಲೆದ್ದಿದೆ. ಈ ಘಟನೆಯಾದ ಕೆಲವೇ ಗಂಟೆಗಳ ನಂತರ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅಧಿಕಾರಿಯನ್ನು ಸಮರ್ಥಿಸಿಕೊಂಡಿದ್ದಾರೆ. ಮಹಿಳೆಯ ಸಾವಿಗೆ ಆಕೆಯೇ ಜವಾಬ್ದಾರಳು ಎಂದು ಅವರು ಹೇಳಿದ್ದಾರೆ.
ವಲಸೆ ಮತ್ತು ಕಸ್ಟಮ್ಸ್ ಜಾರಿ ಅಧಿಕಾರಿ ಮಹಿಳೆಯನ್ನು ಪರಿಶೀಲಿಸಲೆತ್ನಿಸಿದಾಗ ಮಹಿಳೆ ತನ್ನ ಕಾರನ್ನು ವೇಗವಾಗಿ ಚಲಾಯಿಸಿ ಅಲ್ಲಿಂದ ಓಡಿ ಹೋಗಲು ಯತ್ನಿಸಿದ್ದಳು. ಆಗ ಅಧಿಕಾರಿಯೊಬ್ಬರು ಆಕೆಯ ಮೇಲೆ ಹುಂಡು ಹಾರಿಸಿ ಆಕೆಯ ಹತ್ಯೆ ಮಾಡಿದ್ದಾರೆ. ಈ ಘಟನೆ ಸಂಬಂಧ ಮಾಧ್ಯಮದವರು, ಅಂತಹ ಸಂದರ್ಭಗಳಲ್ಲಿ ವಾಹನಕ್ಕೆ ಗುಂಡು ಹಾರಿಸುವುದು ಸ್ವೀಕಾರಾರ್ಹವೇ ಎಂದು ಕೇಳಿದಾಗ ಉತ್ತರಿಸಿದ ಟ್ರಂಪ್, ಆಕೆ ಭಯಾನಕವಾಗಿ ವರ್ತಿಸುತ್ತಿದ್ದಳು. ಕಾರನ್ನು ವೇಗವಾಗಿ ಚಲಾಯಿಸಿ ಓಡಿ ಹೋಗಲು ಯತ್ನಿಸಿದಳು. ಆದ್ದರಿಂದ ಈ ಘಟನೆಯಲ್ಲಿ ಅಧಿಕಾರಿಯ ಯಾವುದೇ ತಪ್ಪಿಲ್ಲ ಎಂದು ಅವರು ಹೇಳಿದ್ದಾರೆ.
ನಂತರ ಅಧ್ಯಕ್ಷರು ಗುಂಡಿನ ದಾಳಿಯ ವೀಡಿಯೊ ತುಣುಕನ್ನು ಪ್ರದರ್ಶಿಸಿದ್ದಾರೆ. ಅದು ಪ್ರಾರಂಭವಾಗುವ ಮೊದಲು, ನಡೆದ ಘಟನೆಯ ಗಂಭೀರತೆಯನ್ನು ಅವರು ಒಪ್ಪಿಕೊಂಡಿದ್ದಾರೆ. ಇಂತಹ ಘಟನೆ ನಡೆಯಬಾರದಿತ್ತು. ಇದು ಹಿಂಸಾತ್ಮಕ ಘಟನೆ ನಿಜ. ಈ ದೃಶ್ಯವೂ ತೂಬಾ ಭಯಾನಕವಾಗಿದೆ. ನನಗೆ ಇದನ್ನು ನೋಡಲು ಇಷ್ಟ ಇಲ್ಲ ಎಂದು ಟ್ರಂಪ್ ಹೇಳಿದ್ದಾರೆ.
ಘಟನೆ ಏನು?
ಐಸಿಇ ಅಧಿಕಾರಿಯೊಬ್ಬರು 37 ವರ್ಷದ ಮಹಿಳೆ ರೆನೀ ನಿಕೋಲ್ ಗುಡ್ ಅವರನ್ನು ಗುಂಡಿಕ್ಕಿ ಕೊಂದ ಘಟನೆಯು ಯುನೈಟೆಡ್ ಸ್ಟೇಟ್ಸ್‌ನಾದ್ಯಂತ ಪ್ರತಿಭಟನೆಗಳಿಗೆ ಕಾರಣವಾಗಿದೆ. ಪ್ರಮುಖ ನಗರಗಳಲ್ಲಿ ಟ್ರಂಪ್ ಆಡಳಿತದ ಇತ್ತೀಚಿನ ವಲಸೆ ಜಾರಿ ಕಾರ್ಯಾಚರಣೆಗಳ ಸಮಯದಲ್ಲಿ ಈ ಘಟನೆ ಸಂಭವಿಸಿದೆ. ವರದಿಯ ಪ್ರಕಾರ, ಬುಧವಾರ ನಡೆದ ಹತ್ಯೆ ಈ ಕಾರ್ಯಾಚರಣೆಗಳಿಗೆ ಸಂಬಂಧಿಸಿದ ಕನಿಷ್ಠ ಐದನೇ ಸಾವಾಗಿದೆ.
ವೀಡಿಯೊದಲ್ಲೇನಿದೆ?
ಘಟನೆಯ ವೀಡಿಯೊದಲ್ಲಿ ರಸ್ತೆಯ ಮಧ್ಯದಲ್ಲಿ ನಿಲ್ಲಿಸಲಾದ ಕಾರನ್ನು ಐಸಿಇ ಏಜೆಂಟ್‌ಗಳು ಸಮೀಪಿಸುತ್ತಿರುವುದು ಕಾಣಿಸಿಕೊಂಡಿದೆ. ಆಗ ವಾಹನ ಅಲ್ಲಿಂದ ನಿರ್ಗಮಿಸಲು ಪ್ರಯತ್ನಿಸಿದೆ. ಆಗ ಅಲ್ಲಿದ್ದ ಒಬ್ಬ ಏಜೆಂಟ್ ಕಾರು ಚಾಲಕಿಯ ಕಡೆಗೆ ಬಂದೂಕನ್ನು ತೋರಿಸುತ್ತಾ ಎರಡು ಬಾರಿ ಗುಂಡುಗಳನ್ನು ಹಾರಿಸುತ್ತಾನೆ. ಇದಾದ ಬಳಿಕ ಕಾರು ನಿಯಂತ್ರಣ ಕಳೆದುಕೊಂಡಂತೆ ಕಾಣುತ್ತದೆ ಮತ್ತು ರಸ್ತೆಯ ಉದ್ದಕ್ಕೂ ನಿಲ್ಲಿಸಿದ್ದ ವಾಹನಗಳಿಗೆ ಡಿಕ್ಕಿ ಹೊಡೆದಿದೆ.
ನಂತರ ಒಳಗೆ ಪರಿಶೀಲಿಸಿದಾಗ ಕಾರು ಚಲಾಯಿಸುತ್ತಿದ್ದ ಮಹಿಳೆ ಶವವಾಗಿ ಕಂಡುಬಂದಿದ್ದಾಳೆ. ಆದರೂ ಅಲ್ಲಿದ್ದ ಅಧಿಕಾರಿಗಳು ಆಕೆಗೆ ಸಿಪಿಆರ್ ನೀಡಿ ಬದುಕಿಸಲು ವಿಫಲ ಯತ್ನ ಮಾಡಿದ್ದಾರೆ. ಸ್ಥಳದಲ್ಲಿದ್ದ ನಿವಾಸಿಗಳು ಆಕ್ರೋಶದಿಂದ ನೀವು ನಮ್ಮ ನೆರೆಹೊರೆಯ ಮಹಿಳೆಯನ್ನು ಕೊಂದಿದ್ದೀರಿ ಎಂದು ಆಕ್ರೋಶದಿಂದ ಹೇಳಿರುವುದು ಕೇಳಿ ಬಂದಿದೆ.
ಇದನ್ನೂ ಓದಿ : ಟ್ರಂಪ್ ನಿಂದ ಪ್ರಧಾನಿ ಮೋದಿ ಅವಹೇಳನ – ಭಾರತಕ್ಕೆ ಮೌನವೇ ಆಭರಣ!