ಮಂಡ್ಯ: ಮಗಳ ಸಾವಿಗೆ ನ್ಯಾಯ ಕೊಡಿಸಲಾಗದೆ ಮನ ನೊಂದ ತಾಯಿಯೊಬ್ಬಳು ಆತ್ಮಹತ್ಯೆಗೆ ಶರಣಾದ ಘಟನೆ ಮಂಡ್ಯ ತಾಲೂಕಿನ ಹೆಬ್ಬಕವಾಡಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ 52 ವರ್ಷದ ಲಕ್ಷ್ಮಿ ಎಂಬುವರೇ ಆತ್ಮಹತ್ಯೆ ಮಾಡಿ ಕೊಂಡ ಮಹಿಳೆ. ಗುರುವಾರ ತಡರಾತ್ರಿ 7 ಗಂಟೆ ಸುಮಾರಿಗೆ ಮಹಿಳೆ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಕಳೆದ ಫೆಬ್ರವರಿ 21 ರಂದು ಮಹಿಳೆಯ ಪುತ್ರಿ ಮಹಾಲಕ್ಷ್ಮಿ ಮಂಡ್ಯದ ರೈಲ್ವೆ ನಿಲ್ದಾಣದಲ್ಲಿ ಚಲಿಸುತ್ತಿದ್ದ ರೈಲಿಗೆ ಸಿಕ್ಕಿ ಆತ್ಮಹತ್ಯೆ ಮಾಡಿಕೊಂಡಿದ್ದಳು. ಈಕೆಯನ್ನು ಪ್ರೀತಿಸಿ ಮದುವೆಯಾ ಗುವುದಾಗಿ ನಂಬಿಸಿ ತನ್ನ ಸ್ವಾರ್ಥಕ್ಕೆ ಬಳಸಿಕೊಂಡ ಯುವಕ ಕೊನೆಗೆ ಮದುವೆಯಾಗಲು ನಿರಾಕರಿಸಿದ್ದರಿಂದ ಮನನೊಂದ ಮಹಾಲಕ್ಷ್ಮಿ ರೈಲಿಗೆ ಸಿಕ್ಕಿ ಆತ್ಮಹತ್ಯೆ ಮಾಡಿಕೊಂಡಳೆಂದು ಕುಟುಂಬದವರು ಆರೋಪಿಸಿದ್ದಾರೆ.
ಈ ಕುರಿತು ಮೊದಲು ರೈಲ್ವೆ ಪೊಲೀಸರಿಗೆ ಕುಟುಂಬದವರು ದೂರು ನೀಡಲು ಹೋದರೆ ಇದು ನಮಗೆ ಬರುವುದಿಲ್ಲ ಗ್ರಾಮಾಂತರ ಪೊಲೀಸ್ ಠಾಣೆಗೆ ಹೋಗಿ ಎಂದು ತಿಳಿಸಿದ್ದರು. ಗ್ರಾಮಾಂತರ ಪೊಲೀಸರಿಗೆ ದೂರು ನೀಡಲು ಹೋದರೆ ಈಕೆ ರೈಲ್ವೆ ನಿಲ್ದಾಣದಲ್ಲಿ ಮೃತಪಟ್ಟಿರುವುದರಿಂದ ಅಲ್ಲೇ ದೂರು ಕೊಡಿ ಎಂದಿದ್ದಾರೆ. ಮಗಳು ಮೃತಪಟ್ಟು ತಿಂಗಳಾಗುತ್ತಿದ್ದರೂ ಎರಡು ಠಾಣೆಗೆ ಅಲೆದರೂ ಮಗಳ ಸಾವಿಗೆ ನ್ಯಾಯ ದೊರಕಿಸಲಾಗದೆ ಮಹಿಳೆ ನೊಂದಿದ್ದರು. ಜೊತೆಗೆ ಮಗಳನ್ನು ವಂಚಿಸಿದ ಯುವಕನ ಕಡೆಯವರಿಂದಲೇ ದಬ್ಬಾಳಿಕೆ ಬೆದರಿಕೆಯ ತಂತ್ರಗಳು ಆರಂಭವಾದವು ಎನ್ನಲಾಗಿದೆ.
ಇದರಿಂದ ಮನನೊಂದ ಲಕ್ಷ್ಮಿ ಅವರು ಈ ಬಗ್ಗೆ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿ ಕೊಂಡಿದ್ದಾರೆ. ಆತ್ಮಹತ್ಯೆ ಸುದ್ದಿ ತಿಳಿಯುತ್ತಿದ್ದಂತೆ ಮೃತಳ ಮನೆ ಮುಂದೆ ನೆರೆದ ಗ್ರಾಮಸ್ಥರು ಆರೋಪಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳು ವಂತೆ ಆಗ್ರಹಿಸಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಹಿರಿಯ ಪೊಲೀಸ್ ಅಧಿಕಾರಿಗಳು ಆರೋಪಿ ವಿರುದ್ಧ ಕ್ರಮ ವಹಿಸುವ ಭರವಸೆ ನೀಡಿ ಶವವನ್ನು ಮಂಡ್ಯ ಮಿಮ್ಸ್ ಆಸ್ಪತ್ರೆ ಶವಾಗಾರಕ್ಕೆ ಸಾಗಿಸಿದ್ದಾರೆ. ಈ ಕುರಿತು ಕುಟುಂಬದವರು ನೀಡಿದ ದೂರಿನ ಆಧಾರದ ಮೇರೆಗೆ ಮಂಡ್ಯ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಪ್ರಾರಂಭಿಸಿದ್ದಾರೆ.