ರಾಜ್ಯ ರಾಜಕಾರಣದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಸ್ಪರ್ಧೆಯ ಬಗ್ಗೆ ಮತ್ತೆ ಚರ್ಚೆ ಮುನ್ನೆಲೆಗೆ ಬಂದಿದೆ. 2023 ರ ವಿಧಾನಸಭಾ ಚುನಾವಣೆಗೆ ಕೋಲಾರ ಕ್ಷೇತ್ರದಿಂದಲೇ ಸಿದ್ದರಾಮಯ್ಯ ಸ್ಪರ್ಧಿಸಲಿದ್ದಾರೆ ಎಂದು ಬಿಂಬಿತವಾಗಿತ್ತು. ಆದರೆ, ಸದ್ಯ ಬಂದಿರುವ ವರದಿಗಳ ಪ್ರಕಾರ ಕೋಲಾರ ಸ್ಪರ್ಧೆಯಿಂದ ಸಿದ್ದರಾಮಯ್ಯ ಹಿಂದೆ ಸರಿಯಲಿದ್ದಾರೆ ಎನ್ನಲಾಗಿದೆ.
ಕಾಂಗ್ರೆಸ್ ಟಿಕೆಟ್ ಹಂಚಿಕೆ ವಿಚಾರದಲ್ಲಿ ಕೈ ನಾಯಕರು ದೆಹಲಿಯಲ್ಲಿ ಬೀಡು ಬಿಟ್ಟಿರುವ ನಡುವೆಯೇ ಈ ಸುದ್ದಿ ಬಂದಿದ್ದು, ಇದರ ಹಿಂದೆ ರಾಹುಲ್ ಗಾಂಧಿ ಲೆಕ್ಕಾಚಾರಗಳು ಕೆಲಸ ಮಾಡಿವೆ ಎನ್ನಲಾಗಿದೆ.
ರಾಹುಲ್ ಗಾಂಧಿ ಸಲಹೆ ಮೇರೆಗೆ ಸಿದ್ದರಾಮಯ್ಯ ಕೋಲಾರದಿಂದ ಹಿಂದೆ ಸರಿದಿದ್ದು, ವರುಣಾ ಕ್ಷೇತ್ರದಿಂದ ಸ್ಪರ್ಧಿಸುವ ಬಗ್ಗೆ ವದಂತಿಗಳು ಹಬ್ಬಿವೆ. ಈ ಹಿಂದೆ ಚಾಮುಂಡೇಶ್ವರಿ ಮತ್ತು ಬಾದಾಮಿ ಕ್ಷೇತ್ರದಿಂದ ಸ್ಪರ್ಧಿಸಿದ್ದ ಸಿದ್ದರಾಮಯ್ಯ, ಚಾಮುಂಡೇಶ್ವರಿಯಲ್ಲಿ ಸೋತು, ಬಾದಾಮಿಯಲ್ಲಿ ಕಡಿಮೆ ಅಂತರದಲ್ಲಿ ಗೆದ್ದಿದ್ದರು. ಹಾಗಾಗಿ, ಈ ಬಾರಿ ಬಾದಾಮಿ ತೊರೆಯುವುದಾಗಿ ಸಿದ್ದರಾಮಯ್ಯ ಹೇಳಿದ್ದರು.
ಅಚ್ಚರಿಗೆ ಕಾರಣವಾದ ಸಿದ್ದು ಹೇಳಿಕೆ
ದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಸಿದ್ದರಾಮಯ್ಯ ನೀಡಿದ ಹೇಳಿಕೆ ಅವರು ಸ್ಪರ್ಧಿಸಲಿರುವ ಕ್ಷೇತ್ರದ ಬಗ್ಗೆ ಮತ್ತೆ ಚರ್ಚೆಗೆ ನಾಂದಿ ಹಾಡಿದೆ.
ಕೇಂದ್ರ ಚುನಾವಣಾ ಸಮಿತಿ ಸಭೆ ಬಳಿಕ ರಾಹುಲ್ ಗಾಂಧಿ ಸಿದ್ದರಾಮಯ್ಯರ ಜೊತೆ ಪ್ರಿಯಾಂಕಾ ಗಾಂಧಿ ಚೇಂಬರ್ ನಲ್ಲಿ ಪ್ರತ್ಯೇಕ ಮಾತುಕತೆ ನಡೆಸಿದ್ದಾರೆ. ಈ ವೇಳೆ ಕೋಲಾರ ವಿಷಯ ಹಾಗೂ ಇತರ ಟಿಕೆಟ್ ಬಗ್ಗೆ ಮಾತುಕತೆ ನಡೆದಿದೆ ಎನ್ನಲಾಗಿದೆ. ಕೋಲಾರದಲ್ಲಿ ನಿಮ್ಮ ಪರ ಅಲೆ ಇಲ್ಲ ಎನ್ನುವ ಬಗ್ಗೆ ವರದಿ ಇದೆ, ಇನ್ನೊಮ್ಮೆ ಚರ್ಚಿಸಿ ನಿರ್ಧಾರ ಕೈಗೊಳ್ಳಿ ಎಂದು ಹೈಕಮಾಂಡ್ ನಾಯಕರು ಸಿದ್ದರಾಮಯ್ಯರಿಗೆ ಸಲಹೆ ನೀಡಿದ್ದಾರೆ.
ಬಳಿಕ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ, ಹೈಕಮಾಂಡ್ ನಿರ್ಧಾರದಂತೆ ನಾನು ಯಾವುದೇ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಹೇಳಿದ್ದಾರೆ.