ಬೆಂಗಳೂರು: ಐದು ಗ್ಯಾರಂಟಿಗಳಲ್ಲಿ ಯಾವುದನ್ನೂ ಕೈಬಿಡುವ ಮಾತೇ ಇಲ್ಲ. ನಾವು ಕರ್ನಾಟಕದ ಜನತೆಗೆ ಐದು ಗ್ಯಾರಂಟಿಗಳ ಭರವಸೆ ನೀಡಿದ್ದೆವು. ಅದು ಇದ್ದಹಾಗೇ ಮುಂದುವರಿಯಲಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಸ್ಪಷ್ಟನೆ ನೀಡಿದ್ದಾರೆ.
ಶಕ್ತಿ ಯೋಜನೆ ಬಗ್ಗೆ ಕಳೆದ ದಿನ ನೀಡಿದ ಹೇಳಿಕೆ ಬಗ್ಗೆ ಸ್ಪಷ್ಟನೆ ನೀಡಿದ ಡಿಸಿಎಂ, ಶಕ್ತಿ ಯೋಜನೆಗೆ ಸಂಬಂಧಿಸಿದಂತೆ ಯಾವುದೇ ಗೊಂದಲ ಇಲ್ಲ. ವಿರೋಧ ಪಕ್ಷಗಳು ಗೊದಲ ಸೃಷ್ಟಿಸಲು ಪ್ರಯತ್ನಿಸುತ್ತಿವೆ. ನಾನು ಹೇಳಿದ್ದೇನೆಂದರೆ, ಕೆಲವು ಅನುಕೂಲಸ್ಥರು, ಕಂಪನಿಗಳ ಉದ್ಯೋಗಿಗಳು ಈ ಮನವಿಯನ್ನು ಮಾಡಿದ್ದಾರೆ. ನನಗೆ ಹಲವು ಮೇಲ್‌ಗಳು, ಮನವಿಗಳು ಬಂದಿವೆ ಎಂದು ಹೇಳಿದರು.
ಏಕೆಂದರೆ ಕೆಲವು ದೊಡ್ಡ ದೊಡ್ಡ ಖಾಸಗಿ ಕಂಪನಿಗಳಲ್ಲಿ ಉಚಿತ ಪ್ರಯಾಣದ ವ್ಯವಸ್ಥೆಯನ್ನು ಕೊಡುತ್ತಿವೆ. ಇವರೆಲ್ಲರೂ ನಾವು ಬಸ್‌ಗಳಲ್ಲಿ ಹಣ ಕೊಟ್ಟರೂ ತೆಗೆದುಕೊಳ್ಳುತ್ತಿಲ್ಲ ಎಂದು ಹೇಳಿದ್ದಾರೆ. ಇವರಿಗೆ ಶಕ್ತಿ ಯೋಜನೆ ಬೇಡ ಎಂದರೆ ನಾನು ಬಲವಂತ ಮಾಡಲು ಆಗುತ್ತಾ? ಇದರ ಬಗ್ಗೆ ಚರ್ಚೆ ಮಾಡುತ್ತೇವೆ ಎಂದಿದ್ದೇನೆ. ಆದರೆ ಯೋಜನೆ ಕೈಬಿಡುವ ಮಾತೇ ಇಲ್ಲ ಎಂದು ಹೇಳಿದರು.
ಬಳಿಕ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮಾತನಾಡಿ, ಶಕ್ತಿ ಯೋಜನೆ ಯಥಾಸ್ಥಿತಿ ಮುಂದುವರಿಯಲಿದೆ. ಮೂರೂವರೆ ವರ್ಷ ಅಷ್ಟೇ ಅಲ್ಲ, ಮುಂದಿನ ಅವಧಿಗೂ ಈ ಯೋಜನೆ ಮುಂದುವರಿಯಲಿದೆ ಎಂದು ಹೇಳಿದರು.