ಮೈಸೂರು : ಈಗಾಗಲೇ ಬಿಜೆಪಿಯ ರಾಜ್ಯ ನಾಯಕತ್ವದ ವಿರುದ್ಧ ಸಿಡಿದೆದ್ದಿರುವ ರೆಬಲ್ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಹೈಕಮಾಂಡ್ ಶೋಕಾಸ್ ನೋಟಿಸ್ ನೀಡಿದ್ದು, ಯತ್ನಾಳ್ ಅವರ ನಡೆ-ನುಡಿಯಿಂದ ಪಕ್ಷಕ್ಕೇ ಮುಜುಗರವಾಗುತ್ತಿರುವಾಗ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡುವ ಸಾಧ್ಯತೆ ಬಗ್ಗೆ ಚರ್ಚೆ ನಡೆಯುತ್ತಿದೆ.
ಇದರ ಬೆನ್ನಲ್ಲೇ ಯತ್ನಾಳ್ ಅವರು ಬಿಜೆಪಿಯಿಂದ ಉಚ್ಛಾಟನೆಗೊಂಡಲ್ಲಿ ಕಾಂಗ್ರೆಸ್ಗೆ ಸೇರುತ್ತಾರೆ ಎಂಬ ಚರ್ಚೆಗಳೂ ನಡೆಯುತ್ತಿವೆ. ಈ ಕುರಿತು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿರುವ ಕೆಪಿಸಿಸಿ ವಕ್ತಾರ ಲಕ್ಷ್ಮಣ್ ಅವರು, ನಮ್ಮ ಪಕ್ಷದ ಸಿದ್ಧಾಂತ ಒಪ್ಪಿ ಬರುವವರಿಗೆ ಸ್ವಾಗತವಿದೆ. ಆದ್ರೆ ಯತ್ನಾಳ್ ಅವರು ಕಾಂಗ್ರೆಸ್ಗೆ ಬರೋದು ಸಾಧ್ಯನಾ ಎಂದು ವಿಡಂಬನೆಯ ರೂಪದಲ್ಲಿ ನಗುತ್ತಲೇ ಹೇಳಿದರು.
ನಿಮ್ಮ ಅನುಮಾನದ ಪ್ರಶ್ನೆಗೆ ನಮ್ಮ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಅವರೇ ಉತ್ತರಿಸಬೇಕು ಎಂದರು. ಇಡೀ ಕಾಂಗ್ರೆಸ್ ನಾಯಕರನ್ನು ಸಿಕ್ಕ-ಸಿಕ್ಕ ಹಾಗೆ ಟೀಕಿಸುವ ಯತ್ನಾಳ್ ಅವರು ಕಾಂಗ್ರೆಸ್ ಗೆ ಬರುತ್ತಾರೆ ಎಂಬುವುದು ನಂಬಲು ಸಾಧ್ಯವೇ ಎಂದು ಮರು ಪ್ರಶ್ನೆ ಹಾಕಿದರು. ಯತ್ನಾಳ್ ಅವರು ಕಾಂಗ್ರೆಸ್ನ ವರಿಷ್ಠರು ಸೇರಿದಂತೆ ಸಿಎಂ, ಡಿಸಿಎಂ ಅವರನ್ನೇ ಬೈಯೋದು ಬಿಟ್ಟಿಲ್ಲ ಎನ್ನುವ ಮೂಲಕ ಯತ್ನಾಳ್ ಕಾಂಗ್ರೆಸ್ಗೆ ಸೇರುವ ಊಹಾಪೋಹಗಳಿಗೆ ಲಕ್ಷ್ಮಣ್ ಅವರು ತೆರೆ ಎಳೆದರು.