ಬೆಂಗಳೂರು: ವರ್ಷಗಟ್ಟಲೆ ಪ್ರೀತಿಸಿ ಮದುವೆಯಾಗಿದ್ದ ಜೋಡಿ ಈಗಷ್ಟೇ ಸಂಸಾರ ಶುರು ಮಾಡಿದ್ದರು. ಎಲ್ಲವೂ ಚೆನ್ನಾಗೇ ಇತ್ತು . ಆದರೆ ಸದ್ಯಕ್ಕೆ ಮಗು ಬೇಡ ಎಂದ ಪತ್ನಿಯ ಪಾಲಿಗೆ ಪತಿ ಯಮನಾಗಿಬಿಟ್ಟಿದ್ದಾನೆ
ಭಟ್ಕಳ ಮೂಲದ ಗಿರಿಜಾಳನ್ನು(30) ಉಸಿರುಗಟ್ಟಿಸಿ ಪತಿ ನವೀನ್ ಕೊಲೆ ಮಾಡಿದ್ದಾನೆ. ಬೆಂಗಳೂರಿನ ಎಚ್‌ಎಎಲ್ ಠಾಣಾ ವ್ಯಾಪ್ತಿಯ ಅನ್ನಸಂದ್ರದಲ್ಲಿ ಈ ದಾರುಣ ಘಟನೆ ನಡೆದಿದೆ.
ಗಿರಿಜಾ ಮತ್ತು ನವೀನ್ ಎಂಟು ತಿಂಗಳ ಹಿಂದೆ ಮದುವೆಯಾಗಿದ್ದರು. ಮದುವೆಯ ನಂತರ ಗರ್ಭಿಣಿಯಾಗಿದ್ದ ಗಿರಿಜಾಗೆ ಗರ್ಭಪಾತವಾಗಿತ್ತು. ಇದರಿಂದ ಖಿನ್ನಳಾಗಿದ್ದ ಗಿರಿಜಾ ಈಗ ಸದ್ಯಕ್ಕೆ ಮಗು ಬೇಡ ಎಂದು ಪತಿಗೆ ಹೇಳಿದ್ದಾಳೆ. ಇದೇ ವಿಚಾರಕ್ಕೆ ಮಾತಿಗೆ ಮಾತು ಬೆಳೆದು ಪತಿ ಪತ್ನಿಯರ ನಡುವೆ ದೊಡ್ಡ ಜಗಳವೇ ನಡೆದುಹೋಗಿದೆ. ಜಗಳ ತಾರಕಕ್ಕೇರಿ ಪತಿ ನವೀನ್ ಗಿರಿಜಾಳ ಕತ್ತು ಹಿಸುಕಿ ಕೊಂದೇಬಿಟ್ಟಿದ್ದಾನೆ
ಏಪ್ರಿಲ್ 12ರ ರಾತ್ರಿ ಮಗು ಮಾಡಿಕೊಳ್ಳುವ ವಿಚಾರಕ್ಕೆ ನಡೆದ ಗಲಾಟೆ ನಂತರ ಪತ್ನಿ ಗಿರಿಜಾ ಮಲಗಿರುವಾಗ ನವೀನ್ ಆಕೆಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ.
ವಿಚಿತ್ರ ಎಂದರೆ ಈ ಜೋಡಿ ವರ್ಷಗಟ್ಟಲೆ ಪ್ರೀತಿಸಿ ಪೋಷಕರ ವಿರೋಧದ ನಡುವೆಯೂ ಮದುವೆಯಾಗಿದ್ದರು. ಬೆಂಗಳೂರಿನ ಗಾರ್ಮೆಂಟ್ಸ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದ
ಗಿರಿಜಾಗೆ ನವೀನ್‌ನ ಪರಿಚಯವಾಗಿ ಪ್ರೀತಿಯ ರೂಪ ಪಡೆದು ಮದುವೆಯಾಗಿದ್ದರು
ಆರೋಪಿ ನವೀನ್ ಪರಾರಿಯಾಗಿದ್ದು ಸದ್ಯ ಎಚ್‌ಎಎಲ್ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ. ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.