ಕರ್ನಾಟಕದ ಹಳ್ಳಿಗಳಲ್ಲಿರುವ ಮರಾಠಿ ಮಾತನಾಡುವ ಜನರಿಗಾಗಿ ಆರೋಗ್ಯ ಯೋಜನೆಯನ್ನು ಮಹಾರಾಷ್ಟ್ರ ಸರ್ಕಾರ ಒದಗಿಸುತ್ತಿರುವುದನ್ನು ಡಿಕೆ ಶಿವಕುಮಾರ್ ಖಂಡಿಸಿದ್ದಾರೆ.
ಬೊಮ್ಮಾಯಿ ನೇತೃತ್ವದ ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದ ಅವರು ರಾಜ್ಯದ ಜನರ ಹಿತ ಕಾಯುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಹೇಳಿದ್ದಾರೆ.
ರಾಜ್ಯದ ಜನರಿಗೆ ಸೇವೆ ನೀಡಲು ಕರ್ನಾಟಕ ಶಕ್ತವಾಗಿದೆ. ಕರ್ನಾಟಕದಲ್ಲಿ ಮಹಾರಾಷ್ಟ್ರ ಯಾಕೆ ಯೋಜನೆ ಘೋಷಿಸುತ್ತಿದೆ? ಕರ್ನಾಟಕ ರಾಜ್ಯವನ್ನು ಮಹಾರಾಷ್ಟ್ರ ಆಳುತ್ತಿದೆಯಾ? ಎಂದು ಆಕ್ರೋಶ ಹೊರಹಾಕಿದ್ದಾರೆ.
ಮಹಾರಾಷ್ಟ್ರಕ್ಕೆ ಒಂದಿಂಚೂ ಭೂಮಿಯನ್ನು ಬಿಟ್ಟು ಕೊಡಲ್ಲ ಎಂದು ಹೇಳಿದ ಡಿಕೆಶಿ, ಮಹಾರಾಷ್ಟ್ರ ತಕರಾರಿನ ಬಗ್ಗೆ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹಸಚಿವ ಅಮಿತ್ ಶಾ ಅವರು ಯಾಕೆ ಮಾತನಾಡುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ.
ಇದು ಕರ್ನಾಟಕದ ಸ್ವಾಭಿಮಾನದ ಪ್ರಶ್ನೆ, ಸಿಎಂ ಬೊಮ್ಮಾಯಿ ಅವರು ಕೂಡಲೇ ರಾಜೀನಾಮೆ ನೀಡಬೇಕೆಂದು ಎಂದು ಡಿಕೆ ಶಿವಕುಮಾರ್ ಆಗ್ರಹ ಮಾಡಿದರು.
ಸಿಎಂ ಬೊಮ್ಮಾಯಿ ರಾಜಿನಾಮೆಗೆ ಸಿದ್ದರಾಮಯ್ಯ ಕೂಡಾ ಆಗ್ರಹಿಸಿದ್ದು, ಕರ್ನಾಟಕದ 800 ಹಳ್ಳಿಗಳಲ್ಲಿ ಆರೋಗ್ಯ ಯೋಜನೆ ಜಾರಿಗೆ ಮಹಾರಾಷ್ಟ್ರ ಮುಂದಾಗಿದೆ. ಆದರೂ ಸಿಎಂ ಬಸವರಾಜ ಬೊಮ್ಮಾಯಿ ಸುಮ್ಮನಿದ್ದಾರೆ. ಕನ್ನಡಿಗರ ಹಿತ ಕಾಪಾಡುವಲ್ಲಿ ಅವರು ವಿಫಲರಾಗಿದ್ದಾರೆ. ಮುಖ್ಯಮಂತ್ರಿ ಸ್ಥಾನದಲ್ಲಿ ಇರಲು ಬೊಮ್ಮಾಯಿ ಲಾಯಕ್ಕಿಲ್ಲ. ಕೂಡಲೇ ಸಿಎಂ ಸ್ಥಾನಕ್ಕೆ ಬೊಮ್ಮಾಯಿ ರಾಜೀನಾಮೆ ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.