ನವದೆಹಲಿ: ದೇಶಕ್ಕೆ ಜಾಗತಿಕ ಮಟ್ಟದಲ್ಲಿ ಅತಿ ಹೆಚ್ಚು ಪದಕಗಳನ್ನು(Medal) ಗೆದ್ದುಕೊಡುತ್ತಿರುವುದು ಹರ್ಯಾಣದ(Haryana) ಕ್ರೀಡಾಪಟುಗಳು, ಆದರೆ ಬೃಹತ್ ಕ್ರೀಡಾಕೂಟಗಳ ಆತಿಥ್ಯ ಮತ್ತು ಲಕ್ಷ ಕೋಟಿ ರೂಪಾಯಿ ಮೂಲಸೌಕರ್ಯಗಳನ್ನು ಗುಜರಾತ್‌ಗೆ(Gujarat) ಮಾತ್ರ ನೀಡಲಾಗುತ್ತಿದೆ ಎಂದು ಹರ್ಯಾಣದ ಕಾಂಗ್ರೆಸ್ ಸಂಸದ ದೀಪೆಂದರ್ ಹೂಡಾ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ತಾರತಮ್ಯವನ್ನು ಖಂಡಿಸಿ ಅವರು ಸಂಸತ್ ಆವರಣದಲ್ಲಿ ಭಿತ್ತಿಪತ್ರಗಳನ್ನು ಪ್ರದರ್ಶಿಸಿ ಪ್ರತಿಭಟನೆ ನಡೆಸಿದರು.
ಕಳೆದ 15-20 ವರ್ಷಗಳಲ್ಲಿ ಭಾರತಕ್ಕೆ ಲಭಿಸಿದ ಅಂತರರಾಷ್ಟ್ರೀಯ ಪದಕಗಳಲ್ಲಿ ಶೇ. 50ರಷ್ಟು ಹರ್ಯಾಣದ ಕ್ರೀಡಾಪಟುಗಳದ್ದೇ ಪಾಲು. ಹೀಗಿದ್ದರೂ 2030ರ ಕಾಮನ್‌ವೆಲ್ತ್ ಗೇಮ್ಸ್ ಆತಿಥ್ಯ ಸೇರಿದಂತೆ ಪ್ರಮುಖ ಐಪಿಎಲ್ ಪಂದ್ಯಗಳು ಹಾಗೂ ವಿಶ್ವಕಪ್ ಪಂದ್ಯಗಳನ್ನು ಅಹಮದಾಬಾದ್‌ಗೆ ನೀಡಲಾಗುತ್ತಿದೆ. ಕನಿಷ್ಠ ಪಕ್ಷ ಹರ್ಯಾಣವನ್ನು ಸಹ-ಆತಿಥ್ಯ ರಾಜ್ಯವನ್ನಾಗಿಯಾದರೂ ಪರಿಗಣಿಸಬೇಕು ಎಂದು ಅವರು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಕಾಮನ್‌ವೆಲ್ತ್‌ನಲ್ಲಿ ಕಮಾಲ್ ಮಾಡಿದ ಸೇನಾ ಯೋಧರು
ಇತ್ತೀಚೆಗೆ ಮುಕ್ತಾಯಗೊಂಡ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತ ಗೆದ್ದ ಒಟ್ಟು 39 ಪದಕಗಳಲ್ಲಿ ಶೇ. 46ರಷ್ಟು ಪದಕಗಳು ಭಾರತೀಯ ಸೇನೆಗೆ ಸೇರಿದ ಅಥ್ಲೀಟ್‌ಗಳ ಪಾಲಾಗಿವೆ. ಕಣಕ್ಕಿಳಿದಿದ್ದ 20 ಮಂದಿ ಸೇನಾ ಸ್ಪರ್ಧಿಗಳ ಪೈಕಿ 16 ಜನರು (8 ಚಿನ್ನ, 7 ಬೆಳ್ಳಿ, 1 ಕಂಚು) ಪದಕ ಗೆದ್ದು ದೇಶಕ್ಕೆ ಕೀರ್ತಿ ತಂದಿದ್ದಾರೆ. ಬಾಕ್ಸರ್ ಜಾಸೀನ್, ಪ್ರೀತಿ, ಸಾಕ್ಷಿ ಹಾಗೂ ಜುಡೋ ಪಟು ಹರ್ಷ್ ಸೇರಿದಂತೆ ಹಲವು ಪ್ರಮುಖರು ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ಲಾಸನ್ ಡೈಮಂಡ್ ಲೀಗ್: ನೀರಜ್‌ಗೆ ಕಠಿಣ ಸ್ಪರ್ಧೆ
ಆಗಸ್ಟ್ 21ರಂದು ನಡೆಯಲಿರುವ ಪ್ರತಿಷ್ಠಿತ ಲಾಸನ್ ಡೈಮಂಡ್ ಲೀಗ್‌ನಲ್ಲಿ ಭಾರತದ ಜಾವೆಲಿನ್ ತಾರೆ ನೀರಜ್ ಚೋಪ್ರಾಗೆ ಭಾರಿ ಪೈಪೋಟಿ ಎದುರಾಗಲಿದೆ. ಒಲಿಂಪಿಕ್ ಚಾಂಪಿಯನ್ ಅರ್ಶದ್ ನದೀಮ್, ಕೆಶೋರ್ನ್ ವಾಲ್ಕಾಟ್, ಆಂಡರ್ಸನ್ ಪೀಟರ್ಸ್ ಸೇರಿದಂತೆ ಪ್ರಮುಖ ಜಾವೆಲಿನ್ ಎಸೆತಗಾರರು ಕಣಕ್ಕಿಳಿಯುತ್ತಿದ್ದು, ಶ್ರೀಲಂಕಾದ ರುಮೇಶ್ ಪತಿರಗೆ ಅವರಿಂದಲೂ ಕಠಿಣ ಸವಾಲು ಎದುರಾಗುವ ನಿರೀಕ್ಷೆಯಿದೆ.
ಗ್ಲಾಸ್ಗೋದಲ್ಲಿ ನಾಪತ್ತೆಯಾದ ಪಾಕಿಸ್ತಾನಿ ಬಾಕ್ಸರ್
ಕಾಮನ್‌ವೆಲ್ತ್ ಗೇಮ್ಸ್ ಮುಗಿಸಿ ತವರಿಗೆ ಮರಳಲು ಕೆಲವೇ ಗಂಟೆಗಳು ಬಾಕಿ ಇರುವಾಗ ಪಾಕಿಸ್ತಾನದ ಬಾಕ್ಸರ್ ಖುದ್ರತುಲ್ಲಾ ಗ್ಲಾಸ್ಗೋದಲ್ಲಿ ನಾಪತ್ತೆಯಾಗಿದ್ದಾರೆ. ಪಂದ್ಯಾವಳಿ ಮುಗಿದ ಬಳಿಕ ಹೊಟೇಲ್ ಕೊಠಡಿಯಿಂದ ಕಾಣೆಯಾಗಿರುವ ಅವರ ಪಾಸ್‌ಪೋರ್ಟ್ ಮತ್ತು ಟಿಕೆಟ್ ಮ್ಯಾನೇಜರ್ ಬಳಿಯೇ ಉಳಿದಿದೆ. ಕಳೆದ ವರ್ಷ ಇಟಲಿಯಲ್ಲಿ ನಡೆದ ಒಲಿಂಪಿಕ್ ಕ್ವಾಲಿಫೈಯರ್ ವೇಳೆಯೂ ಪಾಕಿಸ್ತಾನದ ರೋಹೈಬ್ ಎಂಬ ಬಾಕ್ಸರ್ ಇದೇ ರೀತಿ ನಾಪತ್ತೆಯಾಗಿದ್ದರು.
ಇದನ್ನೂ ಓದಿ : ಕಾಸು ಕೊಟ್ಟವರಿಗೆ ಸಚಿವ ಸ್ಥಾನ – ಕೈ ನಾಯಕರ ಪೇಮೆಂಟ್ ಸೀಟ್ ಆಡಿಯೋ ವೈರಲ್!