ಕಾಂಗ್ರೆಸ್ ಪಕ್ಷವು ನ್ಯಾಯಾಂಗದ ಮೇಲೆ ಒತ್ತಡ ಹೇರುತ್ತಿದೆ ಎಂಬ ಬಿಜೆಪಿಯ ಆರೋಪಗಳ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ರಾಹುಲ್ ಗಾಂಧಿ ಕಿಡಿಕಾರಿದ್ದಾರೆ.
ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಅಭ್ಯರ್ಥಿಗಳ ಎರಡನೇ ಪಟ್ಟಿಯ ಪೂರ್ವಭಾವಿ ಸಭೆಗಾಗಿ ಎಐಸಿಸಿ ಕೇಂದ್ರ ಕಚೇರಿಗೆ ಆಗಮಿಸಿದ ರಾಹುಲ್ ಗಾಂಧಿಗೆ ಪ್ರಶ್ನೆಗಳನ್ನು ಕೇಳಿದ ಪತ್ರಕರ್ತರೊಬ್ಬರು, “ಮಾನನಷ್ಟ ಮೊಕದ್ದಮೆಯಲ್ಲಿ ಜೈಲು ಶಿಕ್ಷೆ ವಿಧಿಸಿದ್ದನ್ನು ಪ್ರಶ್ನಿಸಿ ಸೂರತ್‌ನ ಸೆಷನ್ಸ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸುವ ವೇಳೆ ಪಕ್ಷದ ಮುಖಂಡರು, ಕಾರ್ಯಕರ್ತರು ಭಾರಿ ಸಂಖ್ಯೆಯಲ್ಲಿ ಸೇರಿದ್ದರು. ಇದು ನ್ಯಾಯಾಂಗದ ಮೇಲೆ ಒತ್ತಡ ಹೇರುವ ತಂತ್ರವಾಗಿತ್ತೇ?” ಎಂದು ಪ್ರಶ್ನಿಸಿದ್ದಾರೆ.
ಈ ಪ್ರಶ್ನೆಗೆ ಪ್ರತಿಕ್ರಿಯಿಸಿದ ರಾಹುಲ್, “ನೀವು ಯಾವಾಗಲೂ ಬಿಜೆಪಿ ಹೇಳಿದ್ದನ್ನೇ ಯಾಕೆ ಹೇಳುತ್ತೀರಿ…?’ʼ ಎಂದು ಕೇಳಿದ್ದಾರೆ.
ಪ್ರತಿ ಬಾರಿಯೂ ಬಿಜೆಪಿ ಏನು ಹೇಳುತ್ತದೆಯೋ ನೀವೂ ಅದನ್ನೇ ಹೇಳುತ್ತೀರೀಲ್ಲ? ನನ್ನ ಪ್ರಶ್ನೆ ಬಹಳ ಸರಳ. ಅದಾನಿಗೆ ಸೇರಿದ ಶೆಲ್ ಕಂಪನಿಗಳಲ್ಲಿ ಹೂಡಿಕೆಯಾಗಿರುವ 20 ಸಾವಿರ ಕೋಟಿ ರೂ. ಯಾರಿಗೆ ಸೇರಿದ್ದು? ಇದು ಬೇನಾಮಿ ಹಣ’ ಎಂದು ರಾಹುಲ್ ಮರು ಪ್ರಶ್ನಿಸಿದ್ದಾರೆ.