ಮೈಸೂರು: ಬಂಡೀಪುರ ಸಫಾರಿ ವೇಳೆ ಪ್ರಧಾನಿ ಮೋದಿಯವರಿಗೆ ಹುಲಿ ಕಾಣಲಿಲ್ಲವೆಂದು ವಿಪಕ್ಷಗಳು ಕುಹಕವಾಡುತ್ತಿವೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಸಂಸದ ಪ್ರತಾಪ್ ಸಿಂಹ, ಗುಜರಾತ್ ಸಿಂಹ ಕರ್ನಾಟಕಕ್ಕೆ ಬಂದಾಗಲೆಲ್ಲಾ ಕಾಂಗ್ರೆಸಿಗರು ಯಾಕೆ ಭಯಪಡುತ್ತಾರೆ ಎಂದು ಪ್ರಶ್ನೆ ಮಾಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರು ಬಂಡೀಪುರ ರಾಷ್ಟ್ರೀಯ ಉದ್ಯಾನವನದಲ್ಲಿ 2 ಗಂಟೆ ಕಾಲ 20 ಕಿ.ಮೀ ಸಫಾರಿ ಮಾಡಿದ್ದರು. ಸಫಾರಿ ವೇಳೆ ಪ್ರಧಾನಿ ಮೋದಿಯವರಿಗೆ ಹುಲಿ ಕಾಣಲಿಲ್ಲವೆಂದು ವಿಪಕ್ಷಗಳು ಕುಹಕವಾಡುತ್ತಿವೆ. ಈ ವಿಚರವಾಗಿ ಸಂಸದ ಪ್ರತಾಪ್ ಸಿಂಹ ತಿರುಗೇಟು ನೀಡಿದ್ದು, ಗುಜರಾತ್ ಸಿಂಹ ಕರ್ನಾಟಕಕ್ಕೆ ಬಂದಾಗಲೆಲ್ಲಾ ಕಾಂಗ್ರೆಸಿಗರು ಯಾಕೆ ಭಯಪಡುತ್ತಾರೆ. ವಿಪಕ್ಷ ನಾಯಕ ಸಿದ್ದರಾಮಯ್ಯ ಅವರೇ ಈ ಭಯ ನಿಮ್ಮ ಎದೆಯಲ್ಲಿ ಇರಬೇಕು. ಈ ಭಯ ಮೇ 10ರಂದು ಮತ್ಯಾವ ರೀತಿ ಗೋಚರವಾಗುತ್ತೆ ನೋಡಿ ಎಂದು ಹೇಳಿದ್ದಾರೆ.
ವನ್ಯಜೀವಿಗಳ ಮೇಲಿನ ಕಾಳಜಿಯಿಂದ ಮೋದಿ ಬಂಡೀಪುರಕ್ಕೆ ಬಂದರು. ಸಿದ್ದರಾಮಯ್ಯ ಅವರು ಒಂದು ದಿನವೂ ಬಂಡೀಪುರ, ನಾಗರಹೊಳೆಗೆ ಹೋಗ್ಲಿಲ್ಲ. ಮೈಸೂರಿಗೆ ಬಂದು ಕುರಿ ಚರ್ಬಿ ತಿಂದು ಹೋಗುತ್ತಿದ್ದವರು ನೀವು. ಸಿದ್ದರಾಮಯ್ಯರಿಂದ ಹುಲಿ ಬಗ್ಗೆ ಪಾಠ ಕೇಳಿಬೇಕಿಲ್ಲ ಎಂದರು.
ಹೆಲಿಕಾಪ್ಟರ್ ಶಬ್ದ ಹೆಚ್ಚಾಗಿ ಪ್ರಾಣಿಗಳು ದಟ್ಟ ಅರಣ್ಯದೊಳಗೆ ಹೋಗಿವೆ. ಕನಿಷ್ಠ ಲೋಕ ಜ್ಞಾನವೂ ನಿಮಗೆ ಇಲ್ಲ ಅಂದರೆ ಹೇಗೆ ಹೇಳಿ? ಎಂದು ವಾಗ್ದಾಳಿ ಮಾಡಿದರು.