ಬೆಂಗಳೂರು: ಚುನಾವಣಾ ಆಯೋಗವು (Election Commission) ಕೋಲಾರ (Kolara) ಜಿಲ್ಲೆಯ ಮಾಲೂರು (Malur) ವಿಧಾನಸಭಾ ಕ್ಷೇತ್ರದ ಮರು ಮತಎಣಿಕೆಗೆ ದಿನಾಂಕ ಫಿಕ್ಸ್ ಮಾಡಿದೆ.
ಈ ಸಂಬಂಧ ಕರ್ನಾಟಕ ಚುನಾವಣಾ ಆಯೋಗವು ಆದೇಶ ಮಾಡಿದ್ದು, ನವೆಂಬರ್ 11 ರಂದು ಮಾಲೂರು ವಿಧಾನಸಭಾ ಕ್ಷೇತ್ರದ ಮರು ಮತಎಣಿಕೆಗೆ ದಿನಾಂಕ ನಿಗದಿ ಪಡಿಸಿದೆ. ಮಾಲೂರಿನ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಕೋಲಾರ ಜಿಲ್ಲಾಧಿಕಾರಿಗಳಿಗೆ ಪತ್ರದಲ್ಲಿ ಚುನಾವಣಾ ಆಯೋಗವು ಸೂಚಿಸಿದೆ.
ಇನ್ನೂ ಮರು ಎಣಿಕೆ ಸಂಬಂಧ ಅಧಿಕಾರಿಗಳು ಸಹ ಚುನಾವಣಾ ಆಯೋಗದ ಆದೇಶಕ್ಕಾಗಿ ಕಾದು ಕುಳಿತಿದ್ದಾರೆ. ನವೆಂಬರ್ 11 ರಂದು ಮರು ಮತ ಎಣಿಕೆಯಾದರೂ ಫಲಿತಾಂಶ ಘೋಷಣೆ ಮಾಡುವಂತಿಲ್ಲ. ಮುಚ್ಚಿದ ಲಕೋಟೆಯಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಿದ ಬಳಿಕ ಅಂತಿಮವಾಗಿ ಸುಪ್ರೀಂ ಕೋರ್ಟ್ ಫಲಿತಾಂಶ ಪ್ರಕಟಿಸಲಿದೆ.
ಇದನ್ನೂ ಓದಿ: ಎನ್‌ಡಿಎ ಅಧಿಕಾರಕ್ಕೆ ಬಂದ್ರೆ ಗುಲಾಮಗಿರಿ ಇಲ್ಲದಂತೆ ಮಾಡ್ತೇವೆ-ಯೋಗಿ ಆದಿತ್ಯನಾಥ್
2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೆ.ವೈ. ನಂಜೇಗೌಡ 248 ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ ಕೆ.ಎಸ್. ಮಂಜುನಾಥ್ ಗೌಡ ಅವರನ್ನು ಸೋಲಿಸಿ ಗೆದ್ದಿದ್ದರು. ಆದರೆ ಮತ ಎಣಿಕೆಯಲ್ಲಿ ಅಕ್ರಮ ಆರೋಪದೊಂದಿಗೆ ಮಂಜುನಾಥ್ ಗೌಡ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
ರಾಜ್ಯ ಮುಖ್ಯ ಚುನಾವಣಾ ಆಯುಕ್ತರಿಗೆ ಪತ್ರ ಬರೆದಿರುವ ಮಾಜಿ ಶಾಸಕ ಮಂಜುನಾಥ್ ಗೌಡ ಚುನಾವಣಾ ಸಾಮಗ್ರಿಗಳನ್ನ ಅಕ್ರಮವಾಗಿ ಸಂಗ್ರಹ ಮಾಡಲಾಗಿದೆ. ಚುನಾವಣಾ ಆಯೋಗ ತುರ್ತು ಮಧ್ಯ ಪ್ರವೇಶ ಮಾಡಿ ಭಾರತ ಚುನಾವಣಾ ಆಯೋಗದ ಕಡ್ಡಾಯ ಕಾರ್ಯ ವಿಧಾನದ ಪ್ರಕಾರ ಮತದಾನ ಮತ್ತು ಎಣಿಕೆಯ ನಂತರ ಚುನಾವಣಾ ಸಾಮಾಗ್ರಿಗಳನ್ನು ಮಹಜರು ಮಾಡಿ ಕೋಲಾರದ ಡಿಸಿ ಕಚೇರಿ ಬಳಿ ಇರುವ ಸ್ಟ್ರಾಂಗ್ ರೂಂ ನಲ್ಲಿಡಬೇಕು, ಆದರೆ ಕೆಲ ಸಾಮಗ್ರಿಗಳು ಪತ್ರಿಕೆಗಳು ಮಾಲೂರು ತಹಶೀಲ್ದಾರ್ ಅವರ ಬಳಿ ಇದೆ. ಇದು ಕಾನೂನು ಬಾಹಿರ ಹಾಗೂ ಚುನಾವಣಾ ಪ್ರೋಸಿಡಿಂಗ್ಸ್ಗೆ ವಿರುದ್ದವಾಗಿದೆ. ಮರು ಮತ ಎಣಿಕೆ ಪಾರದರ್ಶಕವಾಗಿರಬೇಕಾದ್ರೆ ತಕ್ಷಣವೆ ವಶಕ್ಕೆ ಪಡೆದು ಅರ್ಜಿದಾರರ ಸಮ್ಮುಖದಲ್ಲಿ ಸ್ಟ್ರಾಂಗ್ ರೂಂಗೆ ಮರಳಿ ತಂದು ಈ ವಿಚಾರ ತಕ್ಷಣ ಸುಪ್ರೀಂ ಕೋರ್ಟ್ ಮುಂದೆ ತರಬೇಕೆಂದು ಮನವಿ ಮಾಡಿದ್ದರು. ಅಲ್ಲದೇ ಜಿಲ್ಲಾಧಿಕಾರಿಗಳನ್ನ ಭೇಟಿಯಾದ ಬಳಿಕ ಮರು ಮತ ಎಣಿಕೆಯಲ್ಲ ಮರು ಚುನಾವಣೆಯೆ ಮಾಡಬೇಕಾಗುತ್ತದೆ ಎಂದರು.
ಆ ಬಳಿಕ ಕೋರ್ಟ್ ಮರು ಮತಎಣಿಕೆಗೆ ಆದೇಶಿಸಿತ್ತು. ಇದೀಗ ಅದರಂತೆ ನವೆಂಬರ್ 11ರಂದು ಮರು ಮತ ಎಣಿಕೆ ನಡೆಯಲಿದೆ.