ಬೆಂಗಳೂರು: ಬಿಜೆಪಿಯವರು ಎಂದೂ ಜನರ ಆಶೀರ್ವಾದ ಪಡೆದುಕೊಂಡು ಅಧಿಕಾರಕ್ಕೆ ಬಂದವರಲ್ಲ, ಆಪರೇಷನ್ ಕಮಲದ ಮೂಲಕ ಅಧಿಕಾರ ಹಿಡಿದವರು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ರಾಜ್ಯದಲ್ಲಿ ಯಾವಾಗೆಲ್ಲ ಅತಂತ್ರ ವಿಧಾನಸಭೆ ಆಗಿರುವಾಗ ಸುಭದ್ರ ಸರ್ಕಾರ ಕೊಡಲು ಸಾಧ್ಯವಾಗಿಲ್ಲ. ಎಲ್ಲಿ ಸುಭದ್ರ ಸರ್ಕಾರ ಇರುವುದಿಲ್ಲವೋ ಅಲ್ಲಿ ಜನಪರ ಆಡಳಿತ ಇರಲು, ರಾಜ್ಯದ ಅಭಿವೃದ್ಧಿ ಆಗಲು ಸಾಧ್ಯವಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
2013ರಲ್ಲಿ ನಮಗೆ ಸ್ಪಷ್ಟ ಬಹುಮತ ಸಿಕ್ಕಿದ್ದರಿಂದ ಉತ್ತಮ ಆಡಳಿತ ನೀಡಿ, ಜನರಿಗೆ ಕೊಟ್ಟ ಎಲ್ಲ ಭರವಸೆಗಳನ್ನು ಈಡೇರಿಸಿದ್ದೆವು. ಜನರಿಗೆ ನಮ್ಮ ಆಡಳಿತದ ಬಗ್ಗೆ ಒಂದು ರೀತಿ ಗೌರವ ಇತ್ತು. ಬಿಜೆಪಿ ಅಥವಾ ಕುಮಾರಸ್ವಾಮಿ ಯಾವಗೆಲ್ಲ ಇದ್ದರು ಆಗ ಸುಭದ್ರ ಸರ್ಕಾರವಾಗಲೀ, ಅಭಿವೃದ್ಧಿ ಆಗಲಿ ಸಾಧ್ಯವಾಗಿರಲಿಲ್ಲ ಎಂದು ಅವರು ಹೇಳಿದ್ದಾರೆ.
ಡಿಕೆ ಶಿವಕುಮಾರ್ ಮಾತನಾಡಿ, ಇದು ಭ್ರಷ್ಟಾಚಾರ ವಿರುದ್ಧದ ಗೆಲುವು. 40% ಕಮಿಷನ್, ಬೆಲೆ ಏರಿಕೆ, ರೈತರ ಸಂಕಷ್ಟಗಳ ವಿರುದ್ಧ, ಗೃಹಿಣಿಯರ ಕಣ್ಣೀರಿನ ವಿರುದ್ಧ, ಯುವ ಸಮುದಾಯದ ನಿರುದ್ಯೋಗ ಸಮಸ್ಯೆ ವಿರುದ್ಧದ ಗೆಲುವು. ಕಾಂಗ್ರೆಸ್ ಗ್ಯಾರಂಟಿಗಳ ಪರ ಗೆಲುವು ಎಂದಿದ್ದಾರೆ.
ಇನ್ನು ಮುಂದೆ ಗೃಹಜ್ಯೋತಿ ಬೆಳಗಲಿದೆ. ಸರ್ಕಾರ ಬಂದ ಮೊದಲ ಸಚಿವ ಸಂಪುಟದಲ್ಲಿ ಈ ಯೋಜನೆ ಜಾರಿಯಾಗಲಿದೆ. ಯುವನಿಧಿಯು ಯುವ ಸಮುದಾಯಕ್ಕೆ ಆತ್ಮವಿಶ್ವಾಸ ತುಂಬಲಿದೆ. ಅನ್ನಭಾಗ್ಯ ಬಡವರ ಹೊಟ್ಟೆ ತುಂಬಿಸಲಿದೆ. ಮಹಿಳೆಯರು ಸುಖವಾಗಿ ಬಸ್ ಪ್ರಯಾಣ ಮಾಡಲಿದ್ದಾರೆ. ಅಂಗನವಾಡಿ, ಆಶಾ ಕಾರ್ಯಕರ್ತೆಯರು ನೆಮ್ಮೆದಿಯ ಉಸಿರು ಬಿಡಲಿದ್ದಾರೆ. ಕೊಟ್ಟ ಮಾತಿನಂತೆ ಈ ಯೋಜನೆಗಳನ್ನು ಜಾರಿ ಮಾಡೇ ಮಾಡುತ್ತೇವೆ ಎಂದು ಹೇಳಿದ್ದಾರೆ.