ನವದೆಹಲಿ: ಮಾನನಷ್ಟ ಪ್ರಕರಣಕ್ಕೆ ಸಂಬಂಧಿಸಿ ಲೋಕಸಭೆ ಸದಸ್ಯತ್ವದಿಂದ ಅನರ್ಹಗೊಂಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರತಿನಿಧಿಸುತ್ತಿದ್ದ ಕೇರಳದ ವಯನಾಡ್ ಕ್ಷೇತ್ರದ ಮುಂದಿನ ಗತಿಯೇನು ಎನ್ನುವ ಪ್ರಶ್ನೆಗೆ ಚುನಾವಣಾ ಆಯೋಗ ಉತ್ತರ ನೀಡಿದೆ.
‘ಮೋದಿ ಉಪನಾಮ’ ಪ್ರಕರಣಕ್ಕೆ ಸಂಬಂಧಿಸಿ ದೋಷಿ ಎಂದು ಕೋರ್ಟ್ ನಿಂದ ಘೋಷಿಸಲ್ಪಟ್ಟಿರುವ ರಾಹುಲ್ ಗಾಂಧಿ ಈಗಾಗಲೇ ಲೋಕಸಭಾ ಸದಸ್ಯತ್ವದಿಂದ ಅನರ್ಹಗೊಂಡಿದ್ದಾರೆ. ಅವರಿಗೆ 2 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಲಾಗಿದೆ.
ಹೀಗಾಗಿ ರಾಹುಲ್ ಗಾಂಧಿ ಪ್ರತಿನಿಧಿಸುತ್ತಿರುವ ಕೇರಳದ ವಯನಾಡ್ ಗೆ ಶೀಘ್ರ ಚುನಾವಣಾ ಆಯೋಗ ಉಪ ಚುನಾವಣೆ ಘೋಷಿಸಲಿದೆ ಎನ್ನುವ ಊಹಾಪೋಹಗಳಿತ್ತು.
ಆದರೆ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್, “ಕೋರ್ಟ್ ರಾಹುಲ್ ಅವರು ಆದೇಶವನ್ನು ಪ್ರಶ್ನಿಸಲು 30 ದಿನಗಳ ಅವಕಾಶ ನೀಡಿದೆ. ಜನತಾ ಪ್ರಾತಿನಿಧ್ಯ ಕಾಯ್ದೆಯಡಿ ವಯನಾಡ್ ಗೆ ಚುನಾವಣೆ ನಡೆಸಲು ಆಯೋಗಕ್ಕೆ 6 ತಿಂಗಳ ಅವಕಾಶವಿದೆ. ಹೀಗಾಗಿ ನಾವು ಕಾಯುತ್ತೇವೆ. ಯಾವುದೇ ತುರ್ತಿಲ್ಲ” ಎಂದು ಹೇಳಿದ್ದಾರೆ.