ನ್ಯೂಯಾರ್ಕ್: ಅಮೆರಿಕದ ಇತಿಹಾಸದಲ್ಲೇ ಕ್ರಿಮಿನಲ್ ಪ್ರಕರಣ ಎದುರಿಸುತ್ತಿರುವ ಪ್ರಪ್ರಥಮ ಅಧ್ಯಕ್ಷ ಎನ್ನುವ ಕುಖ್ಯಾತಿಗೆ ಪಾತ್ರರಾಗಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಾನು ತಪ್ಪಿತಸ್ಥನಲ್ಲ ಎಂದು ನ್ಯೂಯಾರ್ಕ್ ಕೋರ್ಟ್ ಮುಂದೆ ಹೇಳಿಕೆ ನೀಡಿದ್ದಾರೆ.
ಏನಿದು ಪ್ರಕರಣ?
ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ 30ಕ್ಕೂ ಹೆಚ್ಚು ಕಾರ್ಪೊರೇಟ್ ವಂಚನೆಗಳ ಆರೋಪ ಕೇಳಿಬಂದಿತ್ತು. ಇದರಲ್ಲಿ ಪ್ರಮುಖವಾದದ್ದು ನೀಲಿಚಿತ್ರ ತಾರೆ ಸ್ಟಾರ್ಮಿ ಡೇನಿಯಲ್ಸ್ ಗೆ 1,30,000 ಡಾಲರ್ ನೀಡಿದ್ದಾರೆ ಎನ್ನುವುದು. ತನ್ನ ಜೊತೆಗಿನ ಸಂಬಂಧದ ಬಗ್ಗೆ ಎಲ್ಲಿಯೂ ಬಾಯಿಬಿಡದಂತೆ 2016ರ ಅಮೆರಿಕ ಅಧ್ಯಕ್ಷೀಯ ಚುನಾವಣೆ ಸಂದರ್ಭ ಈ ಬೃಹತ್ ಮೊತ್ತವನ್ನು ಸ್ಟಾರ್ಮಿ ಡೇನಿಯಲ್ಸ್ ಗೆ ಪಾವತಿಸಲಾಗಿತ್ತು ಎನ್ನುವ ಆರೋಪಗಳಿವೆ. 2016ರ ಅಧ್ಯಕ್ಷೀಯ ಚುನಾವಣೆಗೆ ಕೆಲ ದಿನಗಳಿರುವಾಗ ಈ ಹಣ ಸಂದಾಯವಾಗಿತ್ತು.
ಈ ಹಣಕಾಸಿನ ವಹಿವಾಟನ್ನು ಕಾನೂನು ಶುಲ್ಕದ ರೀತಿಯಲ್ಲಿ ಮಾಡಲಾಗಿದ್ದು, ಆದರೆ ಇದು ಟ್ರಂಪ್ ಇಮೇಜನ್ನು ಉಳಿಸುವ ಯತ್ನವಾಗಿತ್ತು ಎನ್ನುವ ಪ್ರಬಲ ವಾದ. ಹೀಗಾಗಿ ಅಮೆರಿಕದ ಪ್ರಚಾರ ಹಣಕಾಸು ನಿಯಮಗಳ ಉಲ್ಲಂಘನೆ ಎನ್ನುವ ತೂಗುಗತ್ತಿ ಟ್ರಂಪ್ ಮೇಲಿದೆ.
ಈ ಹಣಕಾಸಿನ ವಹಿವಾಟನ್ನು ಅಡಗಿಸಿಡಲು ಟ್ರಂಪ್ ತನ್ನ ವ್ಯವಹಾರಗಳ ಬಗ್ಗೆ ಸುಳ್ಳು ದಾಖಲೆ ನೀಡಿದ್ದಾರೆ ಎನ್ನುವುದನ್ನು ಪ್ರಾಸಿಕ್ಯೂಟರ್ ಗಳು ಸಾಬೀತುಪಡಿಸಬೇಕಾಗಿದೆ.
ಪ್ರಕರಣದಲ್ಲಿ ತಾನು ತಪ್ಪಿತಸ್ಥನಲ್ಲ ಎಂದಿರುವ ಟ್ರಂಪ್ ಇದರ ಹಿಂದೆ ರಾಜಕೀಯ ದ್ವೇಷವಿದೆ ಎಂದಿದ್ದಾರೆ.
ಪ್ರಕರಣದಲ್ಲಿ ದೋಷಿ ಎಂದಾದರೆ ಸಾಬೀತಾದ ಅಪರಾಧಗಳಿಗೆ ಪ್ರತಿಯೊಂದರಂತೆ 4 ವರ್ಷ ಕಾಲ ಶಿಕ್ಷೆ ಅನುಭವಿಸಬೇಕಾಗಬಹುದು. ಆದರೆ ಯಾವುದೇ ಕ್ರಿಮಿನಲ್ ಹಿನ್ನೆಲೆಯ ಅಪರಾಧಗಳು ಇಲ್ಲದ ಕಾರಣ ಜೈಲು ಶಿಕ್ಷೆ ವಿಧಿಸಬಹುದು ಎನ್ನುವ ಬಗ್ಗೆ ಖಚಿತತೆ ಇಲ್ಲ ಎಂದು ಕಾನೂನು ತಜ್ಞರು ತಿಳಿಸಿದ್ದಾರೆ.