ಕೋಲ್ಕತ್ತಾ: ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತ್ತಾದಲ್ಲಿ ಟ್ರೈನಿ ವೈದ್ಯೆಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣದಲ್ಲಿ ಪಶ್ಚಿಮ ಬಂಗಾಳದ ಸೀಲ್ಡಾ ಕೋರ್ಟ್, ಸಂಜಯ್ ರಾಯ್‌ಗೆ ಜೀವಾವಧಿ ಶಿಕ್ಷೆಯ ಜೊತೆಗೆ 50,000 ರೂ. ದಂಡವನ್ನೂ ವಿಧಿಸಿದೆ.
ಘಟನೆ ಏನು..?: ಕಳೆದ ವರ್ಷ ಆಗಸ್ಟ್ 9 ರಂದು ಆಸ್ಪತ್ರೆಯಲ್ಲಿ ಸರ್ಕಾರಿ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ನಡೆದ ಸ್ನಾತಕೋತ್ತರ ಟ್ರೈನಿ ಮಹಿಳಾ ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಸಂಜಯ್ ರಾಯ್ ತಪ್ಪಿತಸ್ಥ ಎಂದು ಸೀಲ್ದಾ ನ್ಯಾಯಾಲಯದ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಅನಿರ್ಬನ್ ದಾಸ್ ತೀರ್ಪು ನೀಡಿದ್ದಾರೆ. ಈ ಘೋರ ಅಪರಾಧವು ದೇಶಾದ್ಯಂತ ಆಕ್ರೋಶವನ್ನು ಉಂಟುಮಾಡಿತು ಮತ್ತು ಪ್ರತಿಭಟನೆಗಳು ದೀರ್ಘಕಾಲದವರೆಗೆ ಮುಂದುವರಿಯಿತು.
ಆಸ್ಪತ್ರೆಯ ಸೆಮಿನಾರ್ ಕೋಣೆಯಲ್ಲಿ 31 ವರ್ಷದ ವೈದ್ಯರ ಶವ ಪತ್ತೆಯಾದ ಬಳಿಕ 2024 ರ ಆಗಸ್ಟ್ 10 ರಂದು ಸಂಜಯ್‌ನನ್ನು ಬಂಧಿಸಲಾಯಿತು. ನ್ಯಾಯಾಧೀಶರು ಭಾರತೀಯ ನ್ಯಾಯಾಂಗ ಸಂಹಿತೆಯ (BNA) ಸೆಕ್ಷನ್ 64 (ದುಷ್ಕೃತ್ಯ), 66 ಮತ್ತು 103 (1) (ಕೊಲೆ) ಅಡಿಯಲ್ಲಿ ಆತನನ್ನು ದೋಷಿ ಎಂದು ತೀರ್ಪು ನೀಡಿದ್ದರು.
ತನಿಖೆ ಸಿಬಿಐಗೆ ವರ್ಗಾವಣೆ: ಕೋಲ್ಕತ್ತಾ ಹೈಕೋರ್ಟ್ ಪ್ರಕರಣದ ತನಿಖೆಯನ್ನು ಕೋಲ್ಕತ್ತಾ ಪೊಲೀಸರಿಂದ ಸಿಬಿಐಗೆ ವರ್ಗಾಯಿಸಿತ್ತು. ಇಂದು ಮಧ್ಯಾಹ್ನದ ನಂತರ ರಾಯ್ ಹೇಳಿಕೆಯನ್ನು ಆಲಿಸಲಾಗುವುದು ಮತ್ತು ಶಿಕ್ಷೆಯನ್ನು ಪ್ರಕಟಿಸಲಾಗುವುದು ಎಂದು ನ್ಯಾಯಾಧೀಶರು ಹೇಳಿದ್ದರು.
ತೀರ್ಪು ಪ್ರಕಟಿಸುವ ಮುನ್ನ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಈ ವೇಳೆ ಸಂಜಯ್ ರಾಯ್, ನಾನು ಯಾವುದೇ ಅಪರಾಧ ಮಾಡಿಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದ. ಈ ಕುರಿತು ಸಿಬಿಐ, ಇದೊಂದು ಘೋರ ಅಪರಾಧ ಎಂದು ಹೇಳಿದೆ. ಇದು ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ಸಮಾಜದಲ್ಲಿ ಜನರ ನಂಬಿಕೆಯನ್ನು ಉಳಿಸಿಕೊಳ್ಳಲು ಕಠಿಣ ಶಿಕ್ಷೆಯನ್ನು ನಾವು ಕೋರುತ್ತೇವೆ ಎಂದು ಸಿಬಿಐ ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು. ಇತ್ತ ಪ್ರಕರಣದ ಆರೋಪಿಗೆ ಮರಣದಂಡನೆ ವಿಧಿಸಬೇಕೆಂದು ಸಂತ್ರಸ್ತೆಯ ಪೋಷಕರು ಒತ್ತಾಯಿಸಿದ್ದಾರೆ.