Thursday, July 16, 2026
Homeಕ್ರೈಂCRIME : ನಡೆಯದ ಮದುವೆಗೆ ಟಿಕೆಟ್‌ ಕಳಿಸ್ತೀನಿ! : ಕೇತನ್ ಅಗರ್ವಾಲ್ ಕೊಲೆ ಪ್ರಕರಣದಲ್ಲಿ ಸಿಯಾ...

CRIME : ನಡೆಯದ ಮದುವೆಗೆ ಟಿಕೆಟ್‌ ಕಳಿಸ್ತೀನಿ! : ಕೇತನ್ ಅಗರ್ವಾಲ್ ಕೊಲೆ ಪ್ರಕರಣದಲ್ಲಿ ಸಿಯಾ ಗೋಯಲ್ ಚಾಟ್‌ನಲ್ಲಿತ್ತು ರಹಸ್ಯ!!

ಮುಂಬೈ: ರಿಯಲ್ ಎಸ್ಟೇಟ್ ಉದ್ಯಮಿ ಕೇತನ್ ಅಗರ್ವಾಲ್(Ketan Agarwal) ಅವರ ನಿಗೂಢ ಕೊಲೆ ಪ್ರಕರಣದ ತನಿಖೆ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈ ಕೊಲೆ ಪ್ರಕರಣದ ಪ್ರಮುಖ ಆರೋಪಿಯಾದ ಸಿಯಾ ಗೋಯಲ್ (Siya Goyal) ಮೊಬೈಲ್‌ನಿಂದ ಡಿಲೀಟ್ ಆಗಿದ್ದ ಕೆಲವು ಮಹತ್ವದ ಚಾಟ್‌ಗಳನ್ನು ಪೊಲೀಸರು ಮರುಪಡೆದಿದ್ದು (Recover), ತನಿಖೆಯನ್ನು ತೀವ್ರಗೊಳಿಸಿದ್ದಾರೆ. ಈ ಡಿಲೀಟ್ ಆಗಿದ್ದ ಚಾಟ್‌ಗಳು ಈಗ ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿವೆ.

‘ಆಧಾರ್ ಕಾರ್ಡ್ ಕಳಿಸು…’: ವೈರಲ್ ಆದ ಸಿಯಾ ಚಾಟ್ಸ್
ಪೊಲೀಸ್ ತನಿಖಾಧಿಕಾರಿಗಳ ಪ್ರಕಾರ, ಸಿಯಾ ಗೋಯಲ್ ತನ್ನ ಸ್ನೇಹಿತರೊಬ್ಬರ ಜೊತೆ ನಡೆಸಿದ್ದ ವಾಟ್ಸಾಪ್ ಚಾಟ್ ಇದೀಗ ಲಭ್ಯವಾಗಿದೆ. ಅದರಲ್ಲಿ ಸಿಯಾ, ಮದುವೆಯೊಂದಕ್ಕೆ ಟಿಕೆಟ್ ಬುಕ್ ಮಾಡುವ ನೆಪದಲ್ಲಿ ಸ್ನೇಹಿತನಿಗೆ ತನ್ನ ಆಧಾರ್ ಕಾರ್ಡ್‌ನ ಮುಂಭಾಗ ಮತ್ತು ಹಿಂಭಾಗದ ಫೋಟೋಗಳನ್ನು ಕಳುಹಿಸುವಂತೆ ಕೇಳಿದ್ದಾಳೆ.

ಆ ಚಾಟ್‌ನಲ್ಲಿ, “ನಿನ್ನ ಆಧಾರ್ ಕಾರ್ಡ್‌ನ ಮುಂದಿನ ಮತ್ತು ಹಿಂದಿನ ಭಾಗದ ಫೋಟೋ ಕಳಿಸು. ಎಂದಿಗೂ ನಡೆಯದ ಮದುವೆಯೊಂದರ ಟಿಕೆಟ್ ಬುಕ್ಕಿಂಗ್‌ಗಾಗಿ ಇದು ಬೇಕಾಗಿದೆ, ಆದರೂ ಪರವಾಗಿಲ್ಲ ಕಳಿಸು” ಎಂದು ಸಿಯಾ ಹಿಂದಿಯಲ್ಲಿ ಸಂದೇಶ ಕಳುಹಿಸಿರುವುದು ಪತ್ತೆಯಾಗಿದೆ.

ತನಿಖಾ ಸಂಸ್ಥೆಗಳಿಗೆ ಹುಟ್ಟುಹಾಕಿದ ಹೊಸ ಸಂಶಯ
“ಎಂದಿಗೂ ನಡೆಯದ ಮದುವೆ” ಎಂದು ಸಿಯಾ ಚಾಟ್‌ನಲ್ಲಿ ಉಲ್ಲೇಖಿಸಿರುವುದು ಪೊಲೀಸರಲ್ಲಿ ತೀವ್ರ ಕುತೂಹಲ ಹಾಗೂ ಸಂಶಯವನ್ನು ಮೂಡಿಸಿದೆ. ಕೇತನ್ ಅಗರ್ವಾಲ್ ಕೊಲೆಗೆ ಮುನ್ನವೇ ಈ ರೀತಿಯ ಸಂಚು ರೂಪಿಸಲಾಗಿತ್ತೇ? ಅಥವಾ ಮದುವೆಯ ಹೆಸರಿನಲ್ಲಿ ಬೇರೆನಾದರೂ ಹೂಡಿಕೆ ಅಥವಾ ವಂಚನೆಗೆ ಪ್ಲಾನ್ ಮಾಡಲಾಗುತ್ತಿತ್ತೇ? ಎಂಬ ನಿಟ್ಟಿನಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸದ್ಯ ಈ ಎಲ್ಲಾ ಡಿಲೀಟ್ ಆದ ಚಾಟ್‌ಗಳನ್ನು ವಿಧಿವಿಜ್ಞಾನ ಪ್ರಯೋಗಾಲಯದ (FSL) ನೆರವು ಪಡೆದು ಪೊಲೀಸರು ಕೂಲಂಕಷವಾಗಿ ಪರಿಶೀಲಿಸುತ್ತಿದ್ದಾರೆ.

ಕೊಲೆಗೂ ಮುನ್ನ ಅಥವಾ ಕೊಲೆಯ ನಂತರ ಆರೋಪಿಗಳು ಯಾವ ರೀತಿಯ ಸಂಚು ರೂಪಿಸಿದ್ದರು ಮತ್ತು ಈ ಸಂಭಾಷಣೆಯ ಹಿಂದಿನ ಅಸಲಿ ಉದ್ದೇಶವೇನು ಎಂಬುದನ್ನು ಪತ್ತೆಹಚ್ಚಲು ಪೊಲೀಸರು ಈಗ ಈ ಚಾಟ್‌ಗಳನ್ನು ತೀವ್ರವಾಗಿ ವಿಶ್ಲೇಷಿಸುತ್ತಿದ್ದಾರೆ. ತನಿಖೆಯ ವೇಳೆ ವಶಪಡಿಸಿಕೊಳ್ಳಲಾದ ಮೊಬೈಲ್ ಫೋನ್‌ಗಳಿಂದ ಇತ್ತೀಚೆಗಷ್ಟೇ ಈ ಡಿಲೀಟ್ ಆಗಿದ್ದ ಡೇಟಾವನ್ನು ಅಧಿಕಾರಿಗಳು ಮರುಪಡೆದಿದ್ದಾರೆ.

ಕೋಡ್ ವರ್ಡ್ಸ್, ಎಮೋಜಿಗಳ ರಹಸ್ಯ: ಮೂರನೇ ವ್ಯಕ್ತಿಯ ಕೈವಾಡ?
ಆರೋಪಿಗಳ ಫೋನ್‌ನಿಂದ ಸಿಕ್ಕಿರುವ ಚಾಟ್‌ಗಳು ಸಾಮಾನ್ಯ ಭಾಷೆಯಲ್ಲಿಲ್ಲ, ಬದಲಿಗೆ ಕೋಡ್ ವರ್ಡ್ಸ್ (ಸಂಕೇತ ನಾಮಗಳು), ಅಡ್ಡಹೆಸರುಗಳು ಮತ್ತು ಎಮೋಜಿಗಳನ್ನು ಬಳಸಿ ಸಂಭಾಷಣೆ ನಡೆಸಲಾಗಿದೆ ಎಂದು ಪುಣೆ ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಈ ನಿಗೂಢ ಕೋಡ್‌ಗಳ ಹಿಂದೆ ಬೇರೆ ಯಾರಾದರೂ ಭಾಗಿಯಾಗಿದ್ದಾರೆಯೇ ಮತ್ತು ಈ ಕೊಲೆ ಸಂಚಿನಲ್ಲಿ ಮೂರನೇ ವ್ಯಕ್ತಿಯ ಕೈವಾಡವಿದೆಯೇ ಎಂಬ ಬಗ್ಗೆ ತನಿಖಾ ಸಂಸ್ಥೆಗಳು ಆಳವಾದ ಪರಿಶೀಲನೆ ನಡೆಸುತ್ತಿವೆ.

ಬೀಡ್ ಜಿಲ್ಲೆಯ ಯುವಕನ ವಿಚಾರಣೆ: ಕೊಲೆ ಪ್ಲಾನ್ ಗೊತ್ತಿತ್ತೇ?
ಈ ನಡುವೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಬೀಡ್ ಜಿಲ್ಲೆಯ ಯುವಕನೊಬ್ಬನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಸಿಯಾ ಗೋಯಲ್ ಮತ್ತು ಚೇತನ್ ಚೌಧರಿ ಕೊಲೆಯ ಮಾಸ್ಟರ್ ಪ್ಲಾನ್ ಅನ್ನು ಈ ಯುವಕನೊಂದಿಗೆ ಹಂಚಿಕೊಂಡಿದ್ದರು ಎಂಬ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ. ಆದರೆ ವಿಚಾರಣೆ ವೇಳೆ ಆ ಯುವಕ, “ಅವರು ಕೊಲೆಯ ಯೋಜನೆ ಹೇಳಿದಾಗ ನಾನು ಹಾಗೆ ಮಾಡದಂತೆ ಅವರಿಗೆ ಬುದ್ಧಿವಾದ ಹೇಳಿದ್ದೆ” ಎಂದು ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾನೆ. ಈತನ ಹೇಳಿಕೆ ಎಷ್ಟು ನಿಜ ಎಂಬುದನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.

ಪಾಲಿಗ್ರಾಫ್ ಪರೀಕ್ಷೆಗೆ ನಿರಾಕರಣೆ: ಜೈಲು ಪಾಲಾದ ಆರೋಪಿಗಳು
ಪ್ರಕರಣದ ಪ್ರಮುಖ ಆರೋಪಿಗಳಾದ ಸಿಯಾ ಗೋಯಲ್ ಮತ್ತು ಸಹ ಆರೋಪಿ ಚೇತನ್ ಚೌಧರಿ ಇಬ್ಬರೂ ಸತ್ಯ ಶೋಧನಾ ಪರೀಕ್ಷೆಯಾದ ‘ಪಾಲಿಗ್ರಾಫ್ ಟೆಸ್ಟ್’ (ಸುಳ್ಳು ಪತ್ತೆ ಪರೀಕ್ಷೆ)ಗೆ ಒಳಪಡಲು ಸ್ಪಷ್ಟವಾಗಿ ನಿರಾಕರಿಸಿದ್ದಾರೆ. ಸದ್ಯ ನ್ಯಾಯಾಲಯವು ಇವರಿಬ್ಬರಿಗೂ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದ್ದು, ಡಿಜಿಟಲ್ ಸಾಕ್ಷ್ಯಾಧಾರಗಳ ನೆರವಿನೊಂದಿಗೆ ಕೇತನ್ ಅಗರ್ವಾಲ್ ಕೊಲೆ ಪ್ರಕರಣದ ತನಿಖೆ ಚುರುಕಾಗಿ ಮುಂದುವರಿದಿದೆ.

ಇದನ್ನೂ ಓದಿ :  ನೀರು ಕೊಡಿ ಇಲ್ಲಾ ದಯಾಮರಣ ಕೊಡಿ : ಕಿತ್ತೂರಿನಲ್ಲಿ ನೀರಿಗಾಗಿ ದಂಪತಿ ಪ್ರೊಟೆಸ್ಟ್ !

ಹೆಚ್ಚಿನ ಸುದ್ದಿ

Change Language »
error: Content is protected !!