ಬೆಂಗಳೂರು: ಹವಮಾನ ಇಲಾಖೆಯ ಮುನ್ಸೂಚನೆಯಂತೆ ಬೆಂಗಳೂರಿನಲ್ಲಿ ಮಳೆಯ ವಾತಾವರಣ ಭಾನುವಾರವೂ ಸಹ ಮುಂದುವರೆಯಲಿದೆ. ಶುಕ್ರವಾರದಿಂದ ಭಾನುವಾರದಲ್ಲಿ ಹಗುರ ಮಳೆಯಾಗುವ ಮುನ್ಸೂಚನೆಯನ್ನು ಹವಮಾನ ಇಲಾಖೆ ನೀಡಿತ್ತು. ಶುಕ್ರವಾರ ಸಂಜೆ ಬಹುತೇಕ ನಗರದಾದ್ಯಂತ ಉತ್ತಮ ಮಳೆಯಾಗಿದ್ದು, ಅಲ್ಲಲ್ಲಿ ಆಲಿಕಲ್ಲಿನ ಮಳೆಯೂ ಸಹ ಆಗಿತ್ತು.
ಮಾರ್ಚ್ ಆರಂಭದಿಂದಲೇ ಕ್ರಮೇಣ ನಗರದ ಉಷ್ಣಾಂಶದಲ್ಲಿ ಏರಿಕೆಯಾಗುತ್ತಲೇ ಇರುವುದರಿಂದ ಶುಕ್ರವಾರದ ಮಳೆ ಬಹುತೇಕ ನಗರಕ್ಕೆ ತಂಪೆರೆಯಿತು. ಇದು 2023 ವರ್ಷದ ಮೊದಲ ಮಳೆಯೂ ಸಹ ಆಗಿರುವುದರಿಂದ ಜನರು ಮಳೆಯಲ್ಲಿ ಮಿಂದು ಕುಣಿದಾಡಿದರು. ಶನಿವಾರ ಸಂಜೆಯೂ ಸಹ ಅಲ್ಲಲ್ಲಿ ಚದುರಿದಂತೆ ಸಾಧಾರಣ ಮಳೆಯಾಗಿದೆ.
ಅಕಾಲಿಕ ಮಳೆಯಲ್ಲಿ ನೆನೆಯುವುದು ಆರೋಗ್ಯಕ್ಕೆ ಹಾನಿಕರ!
ಧಗೆಯ ವಾತಾವರಣದಲ್ಲಿ ಮಳೆ ಬಂದಾಗ ಜನರು ಎಗ್ಗಿಲ್ಲದೇ ಮಳೆಯಲ್ಲಿ ನೆನೆಯುವುದು ಸಾಮಾನ್ಯ. ಆದರೆ ಇದು ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ವೈದ್ಯರು ಎಚ್ಚರಿಸಿದ್ದಾರೆ. ಈ ರೀತಿಯ ಅಕಾಲಿಕ ಮಳೆಗಳು ವಾತಾವರಣದಲ್ಲಿ ಹೆಪ್ಪುಗಟ್ಟಿರುವ ಮಲಿನಕರ ಅಂಶಗಳನ್ನು ಹಾದು ಬರುತ್ತದೆ. ಜೊತೆಗೆ ಈ ರೀತಿಯ ಅಡ್ಡಮಳೆಗಳಿಂದ ನೆಗಡಿ, ಕೆಮ್ಮು, ಜ್ವರ ಮುಂತಾದ ಶೀತಬಾಧೆಗಳು ಹೆಚ್ಚಬಹುದು ಎಂದಿದ್ದಾರೆ