ಶ್ರೀನಗರ: ಜಮ್ಮು-ಕಾಶ್ಮೀರದ ಸಾಂಬಾ ಜಿಲ್ಲೆಯ ಅಂತಾರಾಷ್ಟ್ರೀಯ ಗಡಿ ಬಳಿ ಡ್ರೋನ್‌ನಿಂದ ಬೀಳಿಸಲಾಗಿದೆ ಎಂದು ಶಂಕಿಸಲಾದ ಪ್ಯಾಕೇಜ್‌ನಿಂದ ಶಸ್ತ್ರಾಸ್ತ್ರ ಮತ್ತು ಸ್ಫೋಟಕ ಸಾಮಗ್ರಿಗಳನ್ನು ಪೊಲೀಸರು ಸೋಮವಾರ ವಶಪಡಿಸಿಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (ಸಾಂಬಾ) ಸುರೀಂದರ್ ಚೌಧರಿ ಈ ಬಗ್ಗೆ ಮಾಹಿತಿ ನೀಡಿದ್ದು, ವಿಜಯಪುರ ಭಾಗದ ರಖ್ ಬರೋತಿಯ ಹೊಲದಲ್ಲಿ ಶಂಕಿತ ಪ್ಯಾಕೇಜ್ ಇರುವ ಬಗ್ಗೆ ನಮಗೆ ಮಾಹಿತಿ ಬಂದಿತು. ತಕ್ಷಣ ಬಾಂಬ್ ನಿಷ್ಕ್ರಿಯ ದಳ ಮತ್ತು ಎಫ್‌ಎಸ್‌ಎಲ್ (ವಿಧಿ ವಿಜ್ಞಾನ ಪ್ರಯೋಗಾಲಯ) ತಂಡಗಳೊಂದಿಗೆ ಸ್ಥಳಕ್ಕೆ ಧಾವಿಸಿ ಪರಿಶೀಲಿಸಿದಾ , ಪೊಟ್ಟಣದಿಂದ ವಶಪಡಿಸಿಕೊಂಡ ಶಸ್ತ್ರಾಸ್ತ್ರಗಳಲ್ಲಿ ಮೂರು ಚೀನಾ ನಿರ್ಮಿತ ಪಿಸ್ತೂಲ್, ಆರು ಮ್ಯಾಗಜೀನ್, 48 ರೌಂಡ್ಸ್ ಮತ್ತು ನಾಲ್ಕು ಹ್ಯಾಂಡ್ ಗ್ರೆನೇಡ್ ಪತ್ತೆಯಾಗಿವೆ ಎಂದು ಹೇಳಿದ್ದಾರೆ.
ಗಡಿಯಾಚೆಯಿಂದ ಡ್ರೋನ್ ಮೂಲಕ ಈ ಪೊಟ್ಟಣವನ್ನು ಇಲ್ಲಿ ಬೀಳಿಸಲಾಗಿದೆ ಎಂದು ಶಂಕಿಸಿದ್ದಾರೆ. ಡ್ರೋನ್ ಮೂಲಕ (ಅಂತಾರಾಷ್ಟ್ರೀಯ ಗಡಿಯುದ್ದಕ್ಕೂ) ಶಸ್ತ್ರಾಸ್ತ್ರಗಳನ್ನು ಬೀಳಿಸಲಾಗಿದೆ ಎಂದು ತೋರುತ್ತಿದೆ. ಈ ಪೊಟ್ಟಣದಲ್ಲಿ ಬಾಕ್ಸ್ ಮತ್ತು 50 ಮೀಟರ್ ಅಳತೆಯ ಪ್ಲಾಸ್ಟಿಕ್‌ನ ಉದ್ದನೆಯ ದಾರವನ್ನು ಹೊಂದಿತ್ತು. ತನಿಖೆಯ ನಂತರವೇ ನಿಖರವಾದ ವಿವರಗಳನ್ನು ಮಾಹಿತಿ ಲಭ್ಯವಾಗಲಿದೆ ಎಂದು ತಿಳಿಸಿದ್ದಾರೆ.