ವರುಣಾದಲ್ಲಿ ವಿಜಯೇಂದ್ರ ಸ್ಪರ್ಧೆ ಮಾಡುವ ಪ್ರಶ್ನೆಯೇ ಇಲ್ಲ ಎಂದು ಬಿಎಸ್‌ವೈ ಹೇಳುತ್ತಿದ್ದಂತೆ, ವರುಣಾ ಬಿಜೆಪಿಗರಲ್ಲಿ ನಿರಾಸೆ ಉಂಟಾಗಿದೆ. ಸಿದ್ದರಾಮಯ್ಯ ವಿರುದ್ಧ ವಿಜಯೇಂದ್ರ ಅಲ್ಲದೆ ಬೇರೆ ಯಾರು ಬಂದ್ರೂ ಗೆಲ್ಲಲ್ಲ, ಹುಲಿ ಜೊತೆ ಹುಲಿಯನ್ನೇ ಫೈಟ್ ಮಾಡೋಕೆ ಬಿಡ್ಬೇಕು, ಆಡನ್ನು ಕಟ್ಟಿದ್ರೆ ಹುಲಿ ಎಳ್ಕೊಂಡು ಹೋಗ್ತದೆ ಎಂದು ಬಿಜೆಪಿ ಕಾರ್ಯಕರ್ತರು ವಿಜಯೇಂದ್ರಗೆ ಹೇಳಿದ್ದಾರೆ.
ಸಿದ್ದರಾಮಯ್ಯರಿಗೆ ಸೋಲಿಲ್ಲ, ಅವರ ಹೊಡೆತ ತಡೆಯಲು ಆಗ್ತಿಲ್ಲ. 15 ವರ್ಷದಿಂದ ಕಾರ್ಯಕರ್ತರು ತಬ್ಬಲಿ ಆಗಿದ್ದೇವೆ. ನೀವು ರಾಜ್ಯ ನಾಯಕರು. ಶಿಕಾರಿಪುರ, ವರುಣಾ ಎರಡೂ ಕಡೆ ನಿಲ್ಲಿ. ಆದ್ರೆ ವರುಣಾ ಮಾತ್ರ ಕೈಬಿಡಬೇಡಿ ಕಾರ್ಯಕರ್ತರು ಬೇಡಿಕೊಂಡಿದ್ದಾರೆ.
ವಿಜಯೇಂದ್ರ ಬಂದರೆ 50 ಸಾವಿರ ಮತಗಳ ಅಂತರದಲ್ಲಿ ಗೆಲ್ತಾರೆ. ಕಾಂಗ್ರೆಸ್ ತಂದೆ- ಮಕ್ಕಳ ನಡುವೆ ಬಿಜೆಪಿ ಕಾರ್ಯಕರ್ತರ ಕೈ ಬಿಡಬಾರದು. ವರುಣಾ ಗೆದ್ರೆ ಹಳೇ ಮೈಸೂರು ಭಾಗದ ಇತರ ಕ್ಷೇತ್ರಗಳಲ್ಲೂ ಬಿಜೆಪಿಗೆ ಶಕ್ತಿ ಬರುತ್ತೆ. ನೀವು ಬಂದು ಸ್ಪರ್ಧೆ ಮಾಡದಿದ್ರೆ ಊಟಕ್ಕೆ ವಿಷ ಹಾಕಿ ಕೊಡಿ ಎಂದು ವಿಜಯೇಂದ್ರ ಎದುರು ಬಿಜೆಪಿ ಕಾರ್ಯಕರ್ತರು ಹೈಡ್ರಾಮ ಮಾಡಿದ್ದಾರೆ.
ಕಾರ್ಯಕರ್ತರ ಮನವೊಲಿಕೆಗೆ ಪ್ರಯತ್ನ ಪಟ್ಟ ವಿಜಯೇಂದ್ರ, ನಾನು ಕೇವಲ ಲಿಂಗಾಯತ ಮತ ಇದೆ ಅನ್ನೋ ಕಾರಣಕ್ಕೆ ವರುಣಾಗೆ ಬರಲ್ಲ, ಅದು ಬಿಎಸ್‌ವೈ ರಾಜಕಾರಣದ ಶೈಲಿಯಲ್ಲ. ನನ್ನ ತಂದೆಗೆ ಎಲ್ಲಾ ಸಮುದಾಯ ಬೇಕು, ನಾನೂ ಹಾಗೆ ನಡೆದುಕೊಳ್ಳುತ್ತೇನೆ, ತಂದೆ ಹಾಗೂ ಪಕ್ಷದ ತೀರ್ಮಾನದಂತೆ ಸ್ಪರ್ಧಿಸುತ್ತೇನೆ ಎಂದಿದ್ದಾರೆ.