ಬೆಂಗಳೂರು: ನಾವು ಯಾವ ವಿವಿಗಳನ್ನು ಕೂಡಾ ಮುಚ್ಚುತ್ತಿಲ್ಲ. ಯಾರು ಕೂಡಾ ಆತಂಕ ಪಡುವ ಅಗತ್ಯವಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ.
ಶುಕ್ರವಾರ ಸದನದಲ್ಲಿ ಮಾತನಾಡಿದ ಸಿಎಂ, ನಾವು ಯಾವ ವಿವಿಗಳನ್ನೂ ಮುಚ್ಚುತ್ತಿಲ್ಲ. ವಿಶ್ವವಿದ್ಯಾಲಯಗಳನ್ನು ಮುಚ್ಚುವ ಬಗ್ಗೆ ತೀರ್ಮಾನ ಆಗಿಲ್ಲ. ಕ್ಯಾಬಿನೆಟ್ ಉಪಸಮಿತಿ ವರದಿಯೇ ಇನ್ನೂ ಬಂದಿಲ್ಲ. ಉಪಸಮಿತಿ ವರದಿ ಬರುವ ಮೊದಲೇ ವಿವಿಗಳನ್ನು ಮುಚ್ಚುವ ಬಗ್ಗೆ ಬಿಜೆಪಿಗೆ ಆತಂಕ ಏಕೆ? ಎಂದು ಅವರು ಪ್ರಶ್ನಿಸಿದರು.
ಸಂಪುಟ ಉಪಸಮಿತಿ ವರದಿ ಕೊಟ್ಟ ನಂತರವೇ ಚರ್ಚೆ ನಡೆಸಲಾಗುತ್ತದೆ. ಈ ಬಗ್ಗೆ ಸಚಿವ ಸಂಪುಟದಲ್ಲಿ ಚರ್ಚೆ ಮಾಡುತ್ತೇವೆ. ಸಂಪುಟ ಉಪಸಮಿತಿ ರಚಿಸಿ ವರದಿಯನ್ನು ಕೇಳಿದ್ದೇವೆ. ಆದರೆ ವರದಿ ಇನ್ನೂ ಬಂದಿಲ್ಲ. ಈ ಬಗ್ಗೆ ವಿಪಕ್ಷಗಳು ಚರ್ಚೆ ಮಾಡುವುದು ಅನಗತ್ಯ ಎಂದು ಸಿಎಂ ಹೇಳಿದರು.