Thursday, April 16, 2026
Homeಕ್ರೀಡೆVIRAT KOHLI : ಐಪಿಎಲ್‌ ಸಮರದ ನಡುವೆಯೂ ಮಡದಿಯೊಡನೆ ಧುರಂಧರ್‌ ವೀಕ್ಷಣೆ - ಇಂಥಾ ಸಿನಿಮಾ...

VIRAT KOHLI : ಐಪಿಎಲ್‌ ಸಮರದ ನಡುವೆಯೂ ಮಡದಿಯೊಡನೆ ಧುರಂಧರ್‌ ವೀಕ್ಷಣೆ – ಇಂಥಾ ಸಿನಿಮಾ ಮತ್ತೊಂದಿಲ್ಲ ಎಂದ ಕೊಹ್ಲಿ!!

ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ಸಿಎಸ್ ಕೆ ವಿರುದ್ಧ ಗೆದ್ದು ಬೀಗಿದ ಬೆನ್ನಲ್ಲೇ, ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ (Virat Kohli) ಚಿತ್ರರಂಗದತ್ತ ಗಮನ ಹರಿಸಿದ್ದಾರೆ. ಇತ್ತೀಚೆಗಷ್ಟೇ ತೆರೆಕಂಡು ದಾಖಲೆ ಬರೆಯುತ್ತಿರುವ ‘ಧುರಂಧರ್ 2 (Dhurandhar 2) ಚಿತ್ರವನ್ನು ವೀಕ್ಷಿಸಿರುವ ಕೊಹ್ಲಿ, ಚಿತ್ರದ ಬಗ್ಗೆ ಮೆಚ್ಚುಗೆಯ ಸುರಿಮಳೆಯನ್ನೇ ಹರಿಸಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಚಿತ್ರದ ಬಗ್ಗೆ ಬರೆದುಕೊಂಡಿರುವ ವಿರಾಟ್ ಕೊಹ್ಲಿ, ನಾನು ಇಂದು ಸಿನಿಮಾ ನೋಡಿದೆ ಮತ್ತು ಭಾರತದಲ್ಲಿ ಇಂತಹ ಒಂದು ಅದ್ಭುತ ಸಿನಿಮೀಯ ಅನುಭವವನ್ನು ನಾನು ಈ ಹಿಂದೆ ಎಂದೂ ಕಂಡಿಲ್ಲ ಎಂದು ಧೈರ್ಯವಾಗಿ ಹೇಳಬಲ್ಲೆ ಎಂದಿದ್ದಾರೆ.

ಈ ಚಿತ್ರವು ಪ್ರತಿಯೊಂದು ಭಾವನೆಗಳನ್ನು ಹೊರತರುತ್ತದೆ ಹಾಗೂ ಸುಮಾರು 4 ಗಂಟೆಗಳ ಕಾಲ ತಾವು ಕಣ್ಣು ಮಿಟುಕಿಸದೆ ಸಿನಿಮಾ ನೋಡಿದ್ದಾಗಿ ಶ್ಲಾಘಿಸಿದ್ದಾರೆ. ನಿರ್ದೇಶಕ ಆದಿತ್ಯ ಧರ್ ಅವರ ಪ್ರತಿಭೆ ಮತ್ತು ದೃಢತೆಯನ್ನು ಕೊಂಡಾಡಿರುವ ಕೊಹ್ಲಿ, ಆದಿತ್ಯ ಅವರನ್ನು ಒಬ್ಬ ಜೀನಿಯಸ್ ಎಂದು ಕರೆದಿದ್ದಾರೆ. ಇನ್ನು ನಟ ರಣವೀರ್ ಸಿಂಗ್ ಅಭಿನಯಕ್ಕೆ ಮಾರುಹೋಗಿರುವ ಕೊಹ್ಲಿ, ಈ ಸಿನಿಮಾದ ನಂತರ ರಣವೀರ್ ಒಂದು ವಿಭಿನ್ನ ಮಟ್ಟ ತಲುಪಿದ್ದಾರೆ ಮತ್ತು ಅವರ ನಟನೆ ಅದ್ಭುತಕ್ಕೂ ಮಿಗಿಲಾಗಿತ್ತು ಎಂದು ಹೊಗಳಿದ್ದಾರೆ.

ಮಾರ್ಚ್ 19 ರಂದು ಬಿಡುಗಡೆಯಾದ ‘ಧುರಂಧರ್ 2’ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಹೊಸ ಇತಿಹಾಸ ಸೃಷ್ಟಿಸುತ್ತಿದೆ. ಜಿಯೋ ಸ್ಟುಡಿಯೋಸ್ ಮಾಹಿತಿ ಪ್ರಕಾರ, ಈ ಚಿತ್ರವು ವಿಶ್ವದಾದ್ಯಂತ ಈವರೆಗೆ ಬರೊಬ್ಬರಿ 1622 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಇದರಲ್ಲಿ ಭಾರತದ ಪಾಲೇ 1228 ಕೋಟಿ ರೂಪಾಯಿಗಳಾಗಿದ್ದು, ವಿದೇಶಗಳಲ್ಲಿ 394 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಚಿತ್ರದ ನಿವ್ವಳ ಭಾರತೀಯ ಕಲೆಕ್ಷನ್ 1041 ಕೋಟಿ ರೂಪಾಯಿಗಳಾಗಿದ್ದು, ಇದು ಚಿತ್ರದ ಬೃಹತ್ ಯಶಸ್ಸನ್ನು ಸಾರುತ್ತಿದೆ.

ಮೊದಲ ದಿನವೇ 102.55 ಕೋಟಿ ರೂಪಾಯಿ ಗಳಿಸುವ ಮೂಲಕ ಶುಭಾರಂಭ ಮಾಡಿದ್ದ ಚಿತ್ರ, ನಂತರದ ಎರಡು ದಿನಗಳಲ್ಲಿ ಕ್ರಮವಾಗಿ 80.72 ಕೋಟಿ ಹಾಗೂ 113 ಕೋಟಿ ರೂಪಾಯಿ ಗಳಿಸಿತ್ತು. ಮಾರ್ಚ್ 22ರ ಭಾನುವಾರದಂದು 114.85 ಕೋಟಿ ರೂಪಾಯಿ ಬಾಚಿಕೊಂಡಿದ್ದ ಸಿನಿಮಾ, ಮೊದಲ ವಾರದುದ್ದಕ್ಕೂ ಸ್ಥಿರವಾಗಿ 40 ರಿಂದ 60 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಬಿಡುಗಡೆಯಾದ 18ನೇ ದಿನದಂದು ಕೂಡ ಭಾರತದಾದ್ಯಂತ 14,229 ಪ್ರದರ್ಶನಗಳಿಂದ 28.75 ಕೋಟಿ ರೂಪಾಯಿ ಗಳಿಸುವ ಮೂಲಕ ತನ್ನ ಅಬ್ಬರವನ್ನು ಮುಂದುವರಿಸಿದೆ.

ವಿರಾಟ್ ಕೊಹ್ಲಿ ಮಾತ್ರವಲ್ಲದೆ, ನಟಿ ಅನುಷ್ಕಾ ಶರ್ಮಾ ಕೂಡ ತಮ್ಮ ಮಾಜಿ ಸಹನಟ ರಣವೀರ್ ಸಿಂಗ್ ಮತ್ತು ಆದಿತ್ಯ ಧರ್ ಅವರ ಅದ್ಭುತ ಕಥಾಹಂದರವನ್ನು ಶ್ಲಾಘಿಸಿದ್ದಾರೆ. ಒಟ್ಟಿನಲ್ಲಿ ‘ಧುರಂಧರ್ 2’ ಕೇವಲ ಜನಸಾಮಾನ್ಯರನ್ನಷ್ಟೇ ಅಲ್ಲದೆ ಸೆಲೆಬ್ರಿಟಿಗಳ ಮನಸ್ಸನ್ನೂ ಗೆಲ್ಲುವಲ್ಲಿ ಯಶಸ್ವಿಯಾಗಿದೆ.

ಹೆಚ್ಚಿನ ಸುದ್ದಿ

Change Language »
error: Content is protected !!