Saturday, May 16, 2026
Homeಟಾಪ್ ನ್ಯೂಸ್VIRAL : ಸೊಳ್ಳೆ ಪರದೆ ಹಾಕಿಕೊಂಡು ಸೆಕ್ಯೂರಿಟಿ ಗಾರ್ಡ್‌ ಡ್ಯೂಟಿ- VIDEO

VIRAL : ಸೊಳ್ಳೆ ಪರದೆ ಹಾಕಿಕೊಂಡು ಸೆಕ್ಯೂರಿಟಿ ಗಾರ್ಡ್‌ ಡ್ಯೂಟಿ- VIDEO

ಹೈದರಾಬಾದ್: ಹೈದರಾಬಾದ್‌ನ ವಸತಿ ಸಮುಚ್ಚಯವೊಂದರಲ್ಲಿ ಭದ್ರತಾ ಸಿಬ್ಬಂದಿಯೊಬ್ಬರು ಸೊಳ್ಳೆ ಪರದೆಯೊಳಗೆ ಕುಳಿತು ರಾತ್ರಿ ಕರ್ತವ್ಯ ನಿರ್ವಹಿಸುತ್ತಿರುವ ದೃಶ್ಯವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ (Viral Video) ಕಾರಣವಾಗಿದೆ. ಸೂರಜ್ ಕುಮಾರ್ ಬೌದ್ಧ ಎಂಬುವವರು ಎಕ್ಸ್ (ಟ್ವಿಟರ್) ಖಾತೆಯಲ್ಲಿ ಹಂಚಿಕೊಂಡಿರುವ ಈ ವಿಡಿಯೋ, ಭಾರತದಲ್ಲಿ ಭದ್ರತಾ ಸಿಬ್ಬಂದಿಗಳು ಎದುರಿಸುತ್ತಿರುವ ಕಠಿಣ ಕೆಲಸದ ಪರಿಸ್ಥಿತಿಯನ್ನು ಎತ್ತಿ ತೋರಿಸುತ್ತಿದೆ.

ಏನಿದೆ ವೈರಲ್‌ ವಿಡಿಯೋದಲ್ಲಿ?
ವೈರಲ್ ಆಗಿರುವ ವಿಡಿಯೋದಲ್ಲಿ, ಮಹಿಳೆಯೊಬ್ಬರು ಸೆಕ್ಯುರಿಟಿ ಗಾರ್ಡ್ ಜೊತೆ ಮಾತನಾಡುತ್ತಿರುವುದು ಕಂಡುಬರುತ್ತದೆ. ಆ ಸಿಬ್ಬಂದಿಯು ತನ್ನ ಕುರ್ಚಿಯ ಸುತ್ತಲೂ ಸೊಳ್ಳೆ ಪರದೆಯನ್ನು ಕಟ್ಟಿಕೊಂಡು, ಅದರ ಒಳಗೆ ಕುಳಿತು ಇಡೀ ರಾತ್ರಿ ಎಚ್ಚರದಿಂದ ಕಾವಲು ಕಾಯುತ್ತಿದ್ದಾರೆ. ವಸತಿ ಸಮುಚ್ಚಯದ ಸದಸ್ಯರು ತಮ್ಮ ಮನೆಗಳಲ್ಲಿ ಎಸಿ ಹಾಕಿಕೊಂಡು ಆರಾಮವಾಗಿ ನಿದ್ರಿಸುತ್ತಿದ್ದರೆ, ತಮಗಾಗಿ ಹಗಲಿರುಳು ಶ್ರಮಿಸುವ ಸಿಬ್ಬಂದಿಗೆ ಕನಿಷ್ಠ ಸುರಕ್ಷಿತವಾದ ಒಂದು ಕೊಠಡಿಯನ್ನೂ ನೀಡಲು ಸಾಧ್ಯವಿಲ್ಲವೇ ಎಂಬ ಪ್ರಶ್ನೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಕೇಳಿಬರುತ್ತಿದೆ.

ಈ ವಿಡಿಯೋ ಹಂಚಿಕೊಂಡಿರುವ ಸೂರಜ್ ಕುಮಾರ್ ಅವರು, “ಭಾರತದಲ್ಲಿ ಸೆಕ್ಯುರಿಟಿ ಗಾರ್ಡ್‌ಗಳ ಜೀವನ ಹೀಗಿದೆ. ಬಡ ಸಿಬ್ಬಂದಿ ಸೊಳ್ಳೆ ಪರದೆ ಹಾಕಿಕೊಂಡು ರಾತ್ರಿ ಪಹರೆ ಮಾಡುತ್ತಿದ್ದಾರೆ. ಜನರ ಮನಸ್ಸಿನಲ್ಲಿ ಬಡವರ ಬಗ್ಗೆ ಕರುಣೆ ಮಾಯವಾಗುತ್ತಿದೆ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಈ ದೃಶ್ಯವನ್ನು ಈಗಾಗಲೇ 4 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದು, ಬಹುತೇಕರು ವಸತಿ ಸಂಘಟನೆಗಳ ವರ್ತನೆಯನ್ನು ಟೀಕಿಸಿದ್ದಾರೆ. “ನಮ್ಮ ರಕ್ಷಣೆಗಾಗಿ ನಿಲ್ಲುವ ಇಂತಹ ಸಿಬ್ಬಂದಿಯನ್ನು ನಾವು ನಡೆಸಿಕೊಳ್ಳುವ ರೀತಿ ಹೃದಯವಿದ್ರಾವಕವಾಗಿದೆ” ಎಂದು ಹಲವರು ಕಾಮೆಂಟ್ ಮಾಡಿದ್ದಾರೆ.

ಆಕ್ರೋಶ ವ್ಯಕ್ತಪಡಿಸಿದ ನೆಟ್ಟಿಗರು
ನೆಟ್ಟಿಗರು ಈ ಬಗ್ಗೆ ಆಕ್ರೋಶ ಹೊರಹಾಕಿದ್ದು, ಲಕ್ಷಾಂತರ ರೂಪಾಯಿಗಳನ್ನು ಮೆಂಟೆನೆನ್ಸ್ ಹೆಸರಿನಲ್ಲಿ ಪಡೆಯುವ ಸೊಸೈಟಿಗಳು, ಕಾವಲುಗಾರರಿಗೆ ಒಂದು ಸಣ್ಣ ಕ್ಯಾಬಿನ್ ಅಥವಾ ಫ್ಯಾನ್ ಸೌಲಭ್ಯವನ್ನೂ ಒದಗಿಸದಿರುವುದು ನಾಚಿಕೆಗೇಡಿನ ಸಂಗತಿ ಎಂದು ಅಭಿಪ್ರಾಯಪಟ್ಟಿದ್ದಾರೆ. ನಗರ ಪ್ರದೇಶಗಳಲ್ಲಿ ಇಂತಹ ದೃಶ್ಯಗಳು ಸಾಮಾನ್ಯವಾಗುತ್ತಿರುವುದು ನಾಗರಿಕ ಸಮಾಜದ ಕ್ರೌರ್ಯವನ್ನು ತೋರಿಸುತ್ತಿದೆ. ಕನಿಷ್ಠ ಮಾನವೀಯತೆಯ ದೃಷ್ಟಿಯಿಂದಲಾದರೂ ಅವರಿಗೆ ಗೌರವಯುತವಾದ ಕೆಲಸದ ವಾತಾವರಣ ನಿರ್ಮಿಸಿಕೊಡಬೇಕು ಎಂಬ ಒತ್ತಾಯ ಕೇಳಿಬರುತ್ತಿದೆ.

ಇದನ್ನೂ ಓದಿ: ಎನರ್ಜಿ ಡ್ರಿಂಕ್‌ನಲ್ಲಿ ಸತ್ತ ಇಲಿ, ವೈರಲ್‌ ವಿಡಿಯೋ ನೋಡಿ ನೆಟ್ಟಿಗರು ಶಾಕ್

ಹೆಚ್ಚಿನ ಸುದ್ದಿ

Change Language »
error: Content is protected !!