ಚಂಡೀಗಢ: ಗುರುಗ್ರಾಮದಲ್ಲಿ ಬುಧವಾರ ರಾತ್ರಿ ಸುರಿದ ಭಾರೀ ಮಳೆಯಿಂದಾಗಿ ರಸ್ತೆಯ ಒಂದು ಭಾಗ ಕುಸಿದಿದ್ದು, ಈ ಕಂದಕಕ್ಕೆ ಟ್ರಕ್ ಒಂದು ಪಲ್ಟಿಯಾದ ಘಟನೆ ನಡೆದಿದೆ.
ಟ್ರಕ್ ರಾತ್ರಿ 10:30 ರ ಸುಮಾರಿಗೆ ಸದರ್ನ್ ಪೆರಿಫೆರಲ್ ರಸ್ತೆ (SPR) ಮೂಲಕ ಹೋಗುತ್ತಿತ್ತು. ಇದೇ ಸಮಯದಲ್ಲಿ ಆ ಪ್ರದೇಶದಲ್ಲಿ ಭಾರೀ ಮಳೆ ಸುರಿಯುತ್ತಿತ್ತು. ಲೋಡ್ ಇದ್ದ ಟ್ರಕ್ ಚಲಿಸುತ್ತಿದ್ದಂತೆಯೇ ರಸ್ತೆಯ ಒಂದು ಭಾಗ ಕುಸಿದು ದೊಡ್ಡ ಹೊಂಡ ರೂಪುಗೊಂಡಿದೆ. ಈ ಗುಂಡಿಗೆ ಟ್ರಕ್ ಪಲ್ಟಿಯಾಗಿ ಸಿಲುಕಿಕೊಂಡಿದೆ. ಪರಿಣಾಮ ವಾಹನ ಸಂಚಾರಕ್ಕೆ ತೀವ್ರ ಅಡಚಣೆಯಾಯಿತು.
ಅವಘಡ ನಡೆದ ಪ್ರದೇಶದಲ್ಲಿ ಭಾರೀ ಮಳೆಯಾದ ಪರಿಣಾಮ ನೀರು ಸಂಗ್ರಹವಾಗಿದ್ದರಿಂದ ಈ ಅವಘಡ ಸಂಭವಿಸಿದೆ. ಇನ್ನು ಘಟನೆಯಿಂದಾಗಿ ಟ್ರಕ್ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಭಾರೀ ಅನಾಹುತದಿಂದ ಪಾರಾಗಿದ್ದಾರೆ.
#WATCH | A truck has been stuck in a ditch at Gurugram’s Southern Peripheral Road since last night. The ditch was formed when a part of the road caved in while the truck was travelling on it. pic.twitter.com/8qZbpQ9gWf
— ANI (@ANI) July 10, 2025
ಇಂದು ಬೆಳಗ್ಗೆಯ ಹೊತ್ತಿಗೆ ಗುರುಗ್ರಾಮ ರಸ್ತೆಗಳಲ್ಲಿ ಸಂಚಾರ ಸ್ಥಗಿತಗೊಳಿಸಲಾಗಿತ್ತು. ದೆಹಲಿ-ಗುರುಗ್ರಾಮ ಎಕ್ಸ್‌ಪ್ರೆಸ್‌ವೇಯ ನರಸಿಂಗ್‌ಪುರ ವಿಭಾಗವು ಹೆಚ್ಚು ಹಾನಿಗೊಳಗಾಗಿತ್ತು. ನಿನ್ನೆ ರಾತ್ರಿಯಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಗುರುಗ್ರಾಮದಾದ್ಯಂತ ಹಲವೆಡೆ ನೀರು ನಿಂತಿರುವ ವರದಿಯಾಗಿದೆ.
ಭಾರತೀಯ ಹವಾಮಾನ ಇಲಾಖೆಯ ಪ್ರಕಾರ, ಗುರುಗ್ರಾಮ್‌ನಲ್ಲಿ 12 ಗಂಟೆಗಳ ಅವಧಿಯಲ್ಲಿ 133 ಮಿ.ಮೀ ಮಳೆಯಾಗಿದ್ದು, ಕೇವಲ 90 ನಿಮಿಷಗಳಲ್ಲಿ 103 ಮಿ.ಮೀ. ಮಳೆಯಾಗಿದೆ. ಮುಂದಿನ 24 ರಿಂದ 48 ಗಂಟೆಗಳಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆಯೊಂದಿಗೆ ಗುರುಗ್ರಾಮ್ ಮತ್ತು ರಾಷ್ಟ್ರೀಯ ರಾಜಧಾನಿ ಪ್ರದೇಶದ (NCR) ಸುತ್ತಮುತ್ತಲಿನ ನಗರಗಳಿಗೆ ಐಎಂಡಿ ಆರೆಂಜ್ ಅಲರ್ಟ್ ಘೋಷಿಸಿದೆ.