Monday, June 15, 2026
Homeಟಾಪ್ ನ್ಯೂಸ್VIRAL NEWS: ಒಂದು ನೆಟ್‌ ಕೊಡುತ್ತೆ ಬೆಂಗಳೂರಿನ ದೊಡ್ಡ ಸಮಸ್ಯೆಗೆ ಮುಕ್ತಿ

VIRAL NEWS: ಒಂದು ನೆಟ್‌ ಕೊಡುತ್ತೆ ಬೆಂಗಳೂರಿನ ದೊಡ್ಡ ಸಮಸ್ಯೆಗೆ ಮುಕ್ತಿ

ಬೆಂಗಳೂರು: ಪ್ರತಿ ವರ್ಷ ಮುಂಗಾರು ಮಳೆ ಆರಂಭವಾಗುತ್ತಿದ್ದಂತೆ ದೇಶದ ಪ್ರಮುಖ ಮಹಾನಗರಗಳು ಎದುರಿಸುವ (Bengaluru) ಬೃಹತ್ ಸವಾಲೆಂದರೆ ರಸ್ತೆಗಳು ಕೆರೆಯಂತಾಗುವುದು (Viral News) ಮತ್ತು ಚರಂಡಿಗಳು ಕಸದಿಂದ ಮುಚ್ಚಿಹೋಗುವುದು. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮುಳುಗಡೆಯಾಗುವ ಅಂಡರ್‌ಪಾಸ್‌ಗಳು, ಮುಂಬೈನ ತ್ಯಾಜ್ಯದಿಂದ ತುಂಬಿ ತುಳುಕುವ ರಾಜಕಾಲುವೆಗಳು ಹಾಗೂ ಚೆನ್ನೈನ ಜಲಾವೃತ ರಸ್ತೆಗಳೇ ಇದಕ್ಕೆ ಸ್ಪಷ್ಟ ನಿದರ್ಶನ. ಆದರೆ, ಈ ದೊಡ್ಡ ಸಮಸ್ಯೆಯನ್ನು ಬಗೆಹರಿಸಲು ಕೋಟ್ಯಾಂತರ ರೂಪಾಯಿಗಳನ್ನ ಖರ್ಚು ಮಾಡುವ ಅಗತ್ಯ ಇಲ್ಲ ಅಥವಾ ಅತ್ಯಾಧುನಿಕ ತಂತ್ರಜ್ಞಾನದ ಅವಶ್ಯಕತೆ ಕೂಡ ಅಗತ್ಯವಿಲ್ಲ, ಬದಲಿಗೆ ಕೇವಲ ಒಂದು ಸರಳ ‘ಜಾಲರಿ’ (Net) ಮೂಲಕ ಶಾಶ್ವತ ಪರಿಹಾರ ಕಂಡುಕೊಳ್ಳಬಹುದು ಎಂಬ ವಿನೂತನ ಐಡಿಯಾವೊಂದು ಸದ್ಯ ಸಾರ್ವಜನಿಕ ವಲಯದಲ್ಲಿ ಭಾರಿ ಸಂಚಲನ ಮೂಡಿಸಿದೆ. ಈ ಕುರಿತು ‘ಬೆಂಗಳೂರು ಪೋಸ್ಟ್’ (@Bengaluru Post) ಎಂಬ ಎಕ್ಸ್ (ಟ್ವಿಟರ್) ಖಾತೆಯು ಹಂಚಿಕೊಂಡಿರುವ ಪೋಸ್ಟ್ ನೆಟ್ಟಿಗರ ಗಮನ ಸೆಳೆದಿದೆ.

ಕಸ ತಡೆಯುವ ಸರಳ ಜಾಲರಿ: ಸಮಸ್ಯೆಗೇ ಹೊಸ ಪರಿಹಾರ!
ಪ್ರತಿ ಮಳೆಗಾಲದಲ್ಲೂ ಮೆಟ್ರೋ ನಗರಗಳು ಮಳೆನೀರು ಮತ್ತು ಪ್ಲಾಸ್ಟಿಕ್ ಕಸದ ನಿರ್ವಹಣೆಗಾಗಿ ಹರಸಾಹಸ ಪಡುತ್ತವೆ. ಈ ಬಗ್ಗೆ ಧ್ವನಿ ಎತ್ತಿರುವ ಪರಿಸರ ಪ್ರೇಮಿಗಳು ಹಾಗೂ ಸಾರ್ವಜನಿಕರು, “ಯಾವಾಗಲೂ ತಲೆನೋವು ತರುವ ಚರಂಡಿಗಳನ್ನೇ ಏಕೆ ಪರಿಹಾರದ ಕೇಂದ್ರವಾಗಿ ಬಳಸಬಾರದು?” ಎಂದು ಪ್ರಶ್ನಿಸಿದ್ದಾರೆ. ನಗರದ ಪ್ರತಿಯೊಂದು ಚರಂಡಿಯ ಮುಖದ್ವಾರ ಅಥವಾ ಪೈಪ್‌ಗಳ ಒಳಭಾಗದಲ್ಲಿ ಗಟ್ಟಿಯಾದ ನೆಟ್‌ಗಳನ್ನು ಅಳವಡಿಸಿದರೆ, ಕಸದ ಸಮಸ್ಯೆಗೆ ಸುಲಭ ಮುಕ್ತಿ ಸಿಗಲಿದೆ. ಈ ಜಾಲರಿಗಳು ಪ್ಲಾಸ್ಟಿಕ್ ಬಾಟಲಿ ಸೇರಿದಂತೆ ಎಲ್ಲಾ ಘನ ತ್ಯಾಜ್ಯಗಳನ್ನು ಒಂದೆಡೆ ತಡೆದು ನಿಲ್ಲಿಸುತ್ತವೆ ಮತ್ತು ಮಳೆನೀರು ಮಾತ್ರ ಯಾವುದೇ ಅಡೆತಡೆಯಿಲ್ಲದೆ ಸರಾಗವಾಗಿ ಹರಿದು ಹೋಗಲು ನೆರವಾಗುತ್ತವೆ. ಇದರಿಂದಾಗಿ ಚರಂಡಿಗಳು ಬ್ಲಾಕ್ ಆಗುವುದು ತಪ್ಪುವುದರ ಜೊತೆಗೆ, ಶೇಖರಣೆಯಾದ ಕಸವನ್ನು ಪೌರಕಾರ್ಮಿಕರು ಅತ್ಯಂತ ಸುಲಭವಾಗಿ ವಿಲೇವಾರಿ ಮಾಡಬಹುದಾಗಿದೆ.

ಐಟಿ ಕಾರಿಡಾರ್ನಲ್ಲಿ ಪ್ರಾಯೋಗಿಕ ಜಾರಿಗೆ ಸಾರ್ವಜನಿಕರ ಒತ್ತಾಯ
ವಿಶೇಷವಾಗಿ ಬೆಂಗಳೂರಿನ ಹೊರವರ್ತುಲ ರಸ್ತೆ (ORR) ವ್ಯಾಪ್ತಿಯಲ್ಲಿ ಅಲ್ಪ ಮಳೆಯಾದರೂ ಸೃಷ್ಟಿಯಾಗುವ ಭೀಕರ ಟ್ರಾಫಿಕ್ ಜಾಮ್ ಹಾಗೂ ಪ್ರವಾಹದ ಪರಿಸ್ಥಿತಿಯನ್ನು ಹತೋಟಿಗೆ ತರಲು ಈ ಅತ್ಯಂತ ಕಡಿಮೆ ವೆಚ್ಚದ ಐಡಿಯಾವನ್ನು ಬಳಸಿಕೊಳ್ಳಬಹುದು ಎಂದು ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದಾರೆ. ಹೊರವರ್ತುಲ ರಸ್ತೆಯ ಐಟಿ ಕಂಪನಿಗಳ ಸಂಘಟನೆಯು (ORRCA) ಈ ನಿಟ್ಟಿನಲ್ಲಿ ಬಿಬಿಎಂಪಿ ಹಾಗೂ ನಗರಾಭಿವೃದ್ಧಿ ಇಲಾಖೆಯೊಂದಿಗೆ ಮಾತುಕತೆ ನಡೆಸಿ, ಮಹದೇವಪುರ ಮತ್ತು ಮಾರತಹಳ್ಳಿ ಭಾಗದ ಚರಂಡಿಗಳಲ್ಲಿ ಪ್ರಾಯೋಗಿಕವಾಗಿ ಈ ‘ನೆಟ್ ತಂತ್ರಜ್ಞಾನ’ ಅಳವಡಿಸುವ ಯೋಜನೆಯನ್ನು ಕೈಗೆತ್ತಿಕೊಳ್ಳಬೇಕು ಎಂದು ಸಾಮಾಜಿಕ ಜಾಲತಾಣಗಳ ಮೂಲಕ ಸರ್ಕಾರಕ್ಕೆ ಒತ್ತಾಯ ಕೇಳಿಬರುತ್ತಿದೆ.

ಇದನ್ನೂ ಓದಿ : ಇಂದಿನಿಂದಲೇ ರಾಜ್ಯಾದ್ಯಂತ ಮಳೆ ಶುರು – ಹಲವು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್!

ಹೆಚ್ಚಿನ ಸುದ್ದಿ

Change Language »
error: Content is protected !!