Monday, June 15, 2026
Homeಟಾಪ್ ನ್ಯೂಸ್VIRAL NEWS: ಐಟಿ ಕೆಲಸ ಬೇಡ, ಕುರಿ ಕಾಯೋದು ಸಾಕು: ಪ್ರಕೃತಿಯತ್ತ ಮುಖ ಮಾಡುತ್ತಿದ್ದಾರೆ ಚೀನಾದ...

VIRAL NEWS: ಐಟಿ ಕೆಲಸ ಬೇಡ, ಕುರಿ ಕಾಯೋದು ಸಾಕು: ಪ್ರಕೃತಿಯತ್ತ ಮುಖ ಮಾಡುತ್ತಿದ್ದಾರೆ ಚೀನಾದ ಯುವಕರು!

ಬೆಂಗಳೂರು: ಸಾಮಾನ್ಯವಾಗಿ ಇಂಜಿನಿಯರಿಂಗ್ ಅಥವಾ ಐಟಿ (IT) ಪದವಿ ಮುಗಿಸಿದ ಯುವಕರು ಯಾವುದಾದರೂ ಪ್ರಖ್ಯಾತ ಬಹುರಾಷ್ಟ್ರೀಯ ಕಂಪನಿಯಲ್ಲಿ, ಕೆಲಸ ಮಾಡುವ ಬಯಕೆಯನ್ನ ಹೊಂದಿರುತ್ತಾರೆ. ಬಹುತೇಕ ಎಲ್ಲರೂ ಕೂಡ ಲಕ್ಷ ಲಕ್ಷ ಸಂಬಳ ಪಡೆಯುವ ಕನಸು ಕಾಣುತ್ತಾರೆ. ಆದರೆ, ಜಗತ್ತಿನ ಬೃಹತ್ ಆರ್ಥಿಕ ಶಕ್ತಿಗಳಲ್ಲೊಂದಾದ ಚೀನಾದಲ್ಲಿ ಪರಿಸ್ಥಿತಿ ತೀರಾ ಉಲ್ಟಾ ಆಗಿದೆ. ಅಲ್ಲಿನ ಉನ್ನತ ಶಿಕ್ಷಣ ಪಡೆದ ಯುವಕರು ಮತ್ತು ಸಾಫ್ಟ್‌ವೇರ್ ತಜ್ಞರು ಈಗ ಕಾರ್ಪೊರೇಟ್ ವಲಯಕ್ಕೆ ಗುಡ್‌ಬೈ ಹೇಳಿ, ಕುರಿ ಕಾಯುವ (Shepherd) ಕಾಯಕದತ್ತ ಆಕರ್ಷಿತರಾಗುತ್ತಿದ್ದಾರೆ. ಮೇಲ್ನೋಟಕ್ಕೆ (Viral News)  ಇದು ನಂಬಲು ಕಷ್ಟವೆನಿಸಿದರೂ, ಚೀನಾದ ಇಂದಿನ ಯುವ ಪೀಳಿಗೆಯಲ್ಲಿ ಕಂಡುಬರುತ್ತಿರುವ ಈ ಆಘಾತಕಾರಿ ಹಾಗೂ ವಿಚಿತ್ರ ಬದಲಾವಣೆಯ ಹಿಂದೆ ಕೆಲವು ಗಂಭೀರ ಕಾರಣಗಳಿವೆ.

ಕಾರ್ಪೊರೇಟ್ ಜೀತಪದ್ಧತಿ ಮತ್ತು ನಿರುದ್ಯೋಗದ ತಲೆನೋವು
 ಚೀನಾದ ಯುವಸಮೂಹ ಇಂತಹದ್ದೊಂದು ನಿರ್ಧಾರಕ್ಕೆ ಬರಲು ಅಲ್ಲಿನ ಕಠಿಣ ಕಾರ್ಪೊರೇಟ್ ಸಂಸ್ಕೃತಿಯೇ ಮುಖ್ಯ ಕಾರಣ. ಚೀನಾದ ಐಟಿ ಕ್ಷೇತ್ರದಲ್ಲಿ ‘996’ ಎಂಬ ವಿಲಕ್ಷಣ ನಿಯಮವಿದೆ. ಅಂದರೆ, ಬೆಳಗ್ಗೆ 9 ರಿಂದ ರಾತ್ರಿ 9 ರವರೆಗೆ, ವಾರದಲ್ಲಿ ಸತತ 6 ದಿನಗಳ ಕಾಲ ಕೆಲಸ ಮಾಡಬೇಕಾಗುತ್ತದೆ. ಈ ಕಠಿಣ ದುಡಿಮೆಯಿಂದಾಗಿ ಯುವಕರು ತೀವ್ರ ಮಾನಸಿಕ ಖಿನ್ನತೆ, ದೈಹಿಕ ಆಯಾಸ ಹಾಗೂ ಒತ್ತಡಕ್ಕೆ ಸಿಲುಕುತ್ತಿದ್ದಾರೆ. ಜೊತೆಗೆ ಹೆಚ್ಚುತ್ತಿರುವ ನಿರುದ್ಯೋಗ ಮತ್ತು ಕಚೇರಿಗಳಲ್ಲಿನ ಕಟು ಸ್ಪರ್ಧೆಯಿಂದಾಗಿ ಜೀವನ ತೀರ ಯಾಂತ್ರಿಕವಾಗಿಬಿಟ್ಟಿದೆ. ಇತ್ತೀಚೆಗೆ ಚೀನಾದ ಇನ್ನರ್ ಮಂಗೋಲಿಯಾದ ಜಮೀನುದಾರರೊಬ್ಬರು ತಮ್ಮ ತೋಟದಲ್ಲಿ ಕುರಿ ಮೇಯಿಸಲು ಇಬ್ಬರು ಆಳುಗಳು ಬೇಕಾಗಿದ್ದಾರೆ ಎಂದು ನೀಡಿದ್ದ ಸಣ್ಣ ಜಾಹೀರಾತಿಗೆ ಐಟಿ ಪ್ರೊಫೆಷನಲ್‌ಗಳು ಮತ್ತು ಪದವೀಧರರು ಮುಗಿಬಿದ್ದಿರುವುದು ಅಲ್ಲಿನ ಪರಿಸ್ಥಿತಿಗೆ ಸಾಕ್ಷಿಯಾಗಿದೆ. ದೊಡ್ಡ ನಗರಗಳಿಂದ ದೂರ ಸರಿದು ಪ್ರಕೃತಿಯ ಮಡಿಲಿನಲ್ಲಿ ನೆಮ್ಮದಿ ಹುಡುಕಲು ಇವರು ಮುಂದಾಗುತ್ತಿದ್ದಾರೆ.

ಐಟಿ ಕಂಪನಿಗಳಿಗಿಂತ ಆಕರ್ಷಕ ವೇತನ
 ಚೀನಾದ ಇನ್ನರ್ ಮಂಗೋಲಿಯಾ ಹಾಗೂ ಕ್ಸಿನ್‌ಜಿಯಾಂಗ್‌ನಂತಹ ವಿಶಾಲ ಹಸಿರು ಹುಲ್ಲುಗಾವಲು ಪ್ರದೇಶಗಳಲ್ಲಿ ಜಾನುವಾರುಗಳನ್ನು ನೋಡಿಕೊಳ್ಳುವ ಕಾರ್ಮಿಕರ ಕೊರತೆ ತೀವ್ರವಾಗಿದೆ. ಇದನ್ನು ನೀಗಿಸಲು ಅಲ್ಲಿನ ಫಾರ್ಮ್ ಮಾಲೀಕರು ದೊಡ್ಡ ಮೊತ್ತವನ್ನು ಸಂಬಳವಾಗಿ ನೀಡುತ್ತಿದ್ದಾರೆ. ಈ ಕುರಿ ಕಾಯುವ ಕೆಲಸಕ್ಕೆ ತಿಂಗಳಿಗೆ ಸರಿಸುಮಾರು 10,000 ದಿಂದ 15,000 ಯುವಾನ್ ಭತ್ಯೆ ನೀಡಲಾಗುತ್ತಿದೆ. ಇದನ್ನು ಭಾರತೀಯ ಕರೆನ್ಸಿಗೆ ಹೋಲಿಸಿದರೆ ಅಂದಾಜು ₹1.15 ಲಕ್ಷದಿಂದ ₹1.72 ಲಕ್ಷದವರೆಗೆ ಆಗುತ್ತದೆ. ವಿಶೇಷವೆಂದರೆ, ಚೀನಾದ ನಗರ ಪ್ರದೇಶಗಳಲ್ಲಿ ಸಾಫ್ಟ್‌ವೇರ್ ಕಂಪನಿಗಳು ನೀಡುವ ಆರಂಭಿಕ ವೇತನಕ್ಕಿಂತ ಇದು ಅತ್ಯಂತ ಹೆಚ್ಚಾಗಿದೆ.

ಸಾಫ್ಟ್‌ವೇರ್ ವೃತ್ತಿ ಬಿಟ್ಟು ಈ ಕ್ಷೇತ್ರಕ್ಕೆ ಬಂದಿರುವ ಯುವಕರು ತಮ್ಮ ವಿಭಿನ್ನ ಅನುಭವಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದಾರೆ. “ಇಲ್ಲಿ ಟಾರ್ಗೆಟ್ ರೀಚ್ ಮಾಡುವ ಡೆಡ್‌ಲೈನ್‌ಗಳ ಭೀತಿ ಇಲ್ಲ, ಬಾಸ್‌ಗಳ ಕಿರುಕುಳವಿಲ್ಲ ಹಾಗೂ ದಿನವಿಡೀ ಲ್ಯಾಪ್‌ಟಾಪ್ ಸ್ಕ್ರೀನ್ ನೋಡುವ ತಲೆನೋವಿಲ್ಲ. ಮುಂಜಾನೆ ಎದ್ದು ಹಸಿರು ಮೈದಾನದಲ್ಲಿ ಕುರಿಗಳನ್ನು ಬಿಟ್ಟರೆ ಸಾಕು, ಮನಸ್ಸಿಗೆ ಸಿಗುವ ನೆಮ್ಮದಿಯೇ ಬೇರೆ” ಎಂದು ಅವರು ಖುಷಿ ವ್ಯಕ್ತಪಡಿಸುತ್ತಿದ್ದಾರೆ. ಒಂದು ಕಾಲದಲ್ಲಿ ಕೀಳು ಎಂದು ಭಾವಿಸಲಾಗಿದ್ದ ಕೃಷಿ ಸಂಬಂಧಿತ ಕೆಲಸಗಳು, ಇಂದು ಚೀನಾದ ವಿದ್ಯಾವಂತರ ಪಾಲಿಗೆ ನೆಮ್ಮದಿಯ ಜೀವನಶೈಲಿಯಾಗಿ ಮಾರ್ಪಟ್ಟಿವೆ. ಈ ಹೊಸ ಟ್ರೆಂಡ್ ಮುಂಬರುವ ದಿನಗಳಲ್ಲಿ ಯುವಜನತೆ ವೃತ್ತಿ ಬದುಕಿಗಿಂತ ತಮ್ಮ ಮಾನಸಿಕ ಆರೋಗ್ಯಕ್ಕೆ ಎಷ್ಟು ಮಹತ್ವ ನೀಡಲಿದ್ದಾರೆ ಎಂಬುದನ್ನು ಸ್ಪಷ್ಟಪಡಿಸುತ್ತದೆ.

ಇದನ್ನೂ ಓದಿ : ಬೆಂಗಳೂರಿನಲ್ಲಿ ಮಲಯಾಳಂ ಭಾಷಿಗರಿಗೆ ಆದ್ಯತೆ – ಬ್ಲೂಡಾರ್ಟ್ ವಿರುದ್ದ ಕನ್ನಡಿಗರು ಕಿಡಿ!

ಹೆಚ್ಚಿನ ಸುದ್ದಿ

Change Language »
error: Content is protected !!