ಚಿಕ್ಕೋಡಿ: ಇಷ್ಟು ದಿನ ನಮ್ಮ ಕಾಲನಿಗೆ ಕಾಲಿಡದ ನೀವು ಈಗ ಚುನಾವಣೆ ಪ್ರಚಾರಕ್ಕಾಗಿ ಯಾಕೆ ಬಂದಿದ್ದೀರಿ ಎಂದು ಸಚಿವೆ ಶಶಿಕಲಾ ಜೊಲ್ಲೆಯವರನ್ನು ಜನರು ತರಾಟೆಗೆ ತೆಗೆದುಕೊಂಡ ಘಟನೆ ಬೆಳಗಾವಿಯ ಚಿಕ್ಕೋಡಿ ಕ್ಷೇತ್ರದ ಗಳತಗಾ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ದಲಿತ ಕಾಲೋನಿಗೆ ಸಚಿವೆ ಭೇಟಿ ನೀಡಿದಾಗ, ಇಲ್ಲಿನ ದಲಿತರು ಮೂಲ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಇದುವರೆಗೂ ನಮ್ಮ ಗ್ರಾಮದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ. ಇದುವರೆಗೂ ಗ್ರಾಮಕ್ಕೆ ಕಾಲಿಡದ ನೀವು ಈಗ ಮತಕ್ಕಾಗಿ ಬರುತ್ತಿದ್ದೀರಿ. ನೀವು ಇಲ್ಲಿಗೆ ಬರುವುದು ಬೇಡ ಎಂದು ದಲಿತ ಕಾಲೋನಿಯ ನಿವಾಸಿಗಳು ಸಚಿವೆ ಜೊಲ್ಲೆಯವರನ್ನು ತರಾಟೆಗೆ ತೆಗೆದುಕೊಂಡರು.
ಹಠಾತ್ ಗ್ರಾಮಸ್ಥರ ದಾಳಿಯಿಂದ ತಬ್ಬಿಬ್ದಾದ ಸಚಿವೆ, ಈ ಕುರಿತು ಸಮಜಾಯಿಷಿ ನೀಡಲು ಹೋದರೂ ಸಹ ಯಾವುದೇ ಪ್ರಯೋಜನವಾಗಲಿಲ್ಲ. ಗ್ರಾಮಸ್ಥರು ನಮಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸದೇ ಮತ ಕೇಳಲು ಬರಲೇಬೇಡಿ ಎಂದು ಹರಿಹಾಯ್ದರು.