ಚಿತ್ರದುರ್ಗ: ಗ್ರಾಮಸ್ಥರು ಪೂಜ್ಯಭಾವದಿಂದ ಕಾಣುತ್ತಿದ್ದ ಕತ್ತೆಯ ಅಗಲಿಕೆಗೆ ಹೊಳಲ್ಕೆರೆ ತಾಲ್ಲೂಕಿನ ಮದ್ದೇರಿ ಗ್ರಾಮ ಶೋಕಸಾಗರದಲ್ಲಿ ಮುಳುಗಿದೆ.
ಮದ್ದೇರಿ ಗ್ರಾಮಕ್ಕೆ ಈ ಕತ್ತೆ ಕೆಲ ತಿಂಗಳುಗಳ ಹಿಂದೆ ಬಂದಿತ್ತು. ಇಲ್ಲಿನ ಮಲಸಿಂಗನ ಹಳ್ಳಿಯಲ್ಲಿ ಪ್ರತಿ ವರ್ಷ ಆಂಜನೇಯ ಸ್ವಾಮಿಯ ಸೇಜಿ ಮೆರವಣಿಗೆ ವೇಳೆ ದಾಸಯ್ಯ ಸೇಜಿಯನ್ನ ಹೊತ್ತು ಕುಣಿಯುವ ಆಚರಣೆ ನಡೆಯುತ್ತದೆ. ತನ್ನಿಂತಾನೇ ಈ ಊರಿಗೆ ಬಂದು ನೆಲೆಸಿದ ಕತ್ತೆಯನ್ನು ಪೂಜ್ಯಭಾವದಿಂದ ಕಾಣುವ ಇಲ್ಲಿನ ಜನ ಕತ್ತೆ ಎಂದು ಕರೆಯುವುದರ ಬದಲು ಸೇಜಿ ಎಂದು ಕರೆಯುತ್ತಾರೆ.
ಮನೆಮನೆಗೂ ಭೇಟಿ ನೀಡುತ್ತಿದ್ದ ಸೇಜಿಗೆ ಜನ ಅನ್ನಾಹಾರ, ಬಿಸ್ಕೆಟ್ ನೀಡಿ ಪೂಜೆಯನ್ನೂ ಸಲ್ಲಿಸುತ್ತಿದ್ರು. ಆದರೆ ಒಂದು ವಾರದ ಹಿಂದೆ ಅನಾರೋಗ್ಯದಿಂದ ಬಳಲುತ್ತಿದ್ದ ಸೇಜಿ ಅನ್ನಾಹಾರ ತ್ಯಜಿಸಿ ಮರಣ ಹೊಂದಿದೆ.
ದೇವರಂತೆ ಕಾಣುತ್ತಿದ್ದ ಸೇಜಿ ಅಗಲಿಕೆಗೆ ಕಣ್ಣೀರಿಟ್ಟ ಗ್ರಾಮಸ್ಥರು ಸೇಜಿಯ ಶವಯಾತ್ರೆ ಮಾಡಿ ಅಂತ್ಯಸಂಸ್ಕಾರವನ್ನೂ ಮಾಡಿದ್ದಾರೆ. ಊರಿಗೂರೇ ಶೋಕಾಚರಣೆ ಮಾಡಿ ಗ್ರಾಮಸ್ಥರಾದ ಲೋಕೇಶ್ ಸೇಜಿಯ ಸಮಾಧಿ ನಿರ್ಮಿಸಲು ತಮ್ಮ ಜಮೀನಿನಲ್ಲಿ ಜಾಗವನ್ನೂ ನೀಡಿದ್ದಾರೆ. ಅಲ್ಲದೇ ಸೇಜಿ ಹೆಸರಲ್ಲಿ ಗ್ರಾಮಸ್ಥರಿಗೆ ಅನ್ನಸಂತರ್ಪಣೆಯೂ ನಡೆದಿದೆ. ದೈವಸ್ವರೂಪಿ ಸೇಜಿಗೆ ಗ್ರಾಮಸ್ಥರು ಭಾವಪೂರ್ಣ ವಿದಾಯ ಹೇಳಿದ್ದಾರೆ.