ಬೆಳಗಾವಿ: ಸಿಎಂ ಬಸವರಾಜ ಬೊಮ್ಮಾಯಿ ಅವರು ಪ್ರತಿದಿನಾ ಸಿ.ಸಿ.ಪಾಟೀಲ್ ಅವರ ಮನೆಯಲ್ಲಿ ಕುಳಿತು ಕುಡಿಯೋದಿಲ್ವಾ ಎಂದು ವಿಜಯಾನಂದ ಕಾಶಪ್ಪನವರ್ ತಿರುಗೇಟು ನೀಡಿದ್ದಾರೆ. ಜೊತೆಗೆ ಈ ರೀತಿಯ ಅಪಹಾಸ್ಯವಾಗಿ, ಹಗುರವಾಗಿ ಮಾತನಾಡುವುದು ಯಾರಿಗೂ ಗೌರವ ತರುವುದಿಲ್ಲ ಎಂದು ನೀತಿವಚನವನ್ನೂ ಬೋಧಿಸಿದ್ದಾರೆ.
ವಿಜಯಾನಂದ ಕಾಶಪ್ಪನವರ್, ಜಯಮೃತ್ಯುಂಜಯ ಸ್ವಾಮೀಜಿಯವರ ಬಳಿ ಮೀಸಲಾತಿ ಬಗ್ಗೆ ತಮ್ಮ ಅಸಮಾಧಾನವನ್ನು ತೋಡಿಕೊಂಡಿದ್ದರು. ಈ ವೇಳೆ ಇಬ್ಬರ ನಡುವೆ ಜೋರುಮಾತಿನ ವಾಗ್ವಾದವೂ ನಡೆದಿತ್ತು. ಇದನ್ನು ಉಲ್ಲೇಖಿಸಿ ಸಿ.ಸಿ.ಪಾಟೀಲ್ ವಿಜಯಾನಂದ ಕಾಶಪ್ಪನವರ್ ಕುಡಿದುಬಂದು ಸ್ವಾಮೀಜಿಯ ಬಳಿ ಮಾತನಾಡಿದ್ದಾರೆ ಎಂದು ಟೀಕಿಸಿದ್ದರು.
ಪಂಚಮಸಾಲಿ ಮೀಸಲಾತಿ ಹೋರಾಟದ ಸಂಬಂಧಿತ ಬೆಳಗಾವಿಯ ಗಾಂಧಿಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಜಯಾನಂದ ಕಾಶಪ್ಪನವರ್, ಒಕ್ಕಲಿಗರು ಮತ್ತು ಪಂಚಮಸಾಲಿ ಸಮುದಾಯಕ್ಕೆ ನೀಡಿರುವ ಮೀಸಲಾತಿ ಸಂವಿಧಾನದ ಚೌಕಟ್ಟಿನಲ್ಲಿ ಬರುವುದಿಲ್ಲ, ಇದು ಸಂವಿಧಾನ ವಿರೋಧಿ ಮೀಸಲಾತಿ ಎಂದು ಟೀಕಿಸಿದರು.
ನ್ಯಾಯಾಲಯದಲ್ಲಿ ಇಂದಲ್ಲ ನಾಳೆ ಬಿದ್ದುಹೋಗುವ ಮೀಸಲಾತಿಯಿದು ಎಂದು ಆರೋಪಿಸಿದ ಕಾಶಪ್ಪನವರ್, ಕೇವಲ ಚುನಾವಣಾ ಗಿಮಿಕ್‍ಗಾಗಿ ಬೊಮ್ಮಾಯಿ ಸರ್ಕಾರ ಜನರನ್ನು ವಂಚಿಸುತ್ತಿದ್ದಾರೆ. ಪಂಚಮಸಾಲಿ ಸಮುದಾಯ ಎಂದರೆ ಕೊಡುಗೈ ದಾನಿಗಳ ಸಮಾಜ. ಇಂಥಾ ಸಮುದಾಯಕ್ಕೆ ಅಲ್ಪಸಂಖ್ಯಾತರ ಮೀಸಲಾತಿಯನ್ನು ಕಸಿದು ಕೊಟ್ಟಿರುವುದು ಮೂರ್ಖತನ, ಯಾರನ್ನೂ ನೋಯಿಸಿ ಪಡೆಯುವ ಮೀಸಲಾತಿ ನಮಗೆ ಬೇಡ ಎಂದರು.