ಬೆಂಗಳೂರು: ದೇಶಭ್ರಷ್ಟ ಉದ್ಯಮಿ ವಿಜಯ್ ಮಲ್ಯ (Vijay Mallya) ತನ್ನ ಹಿಂದಿನ ಮಾಲೀಕತ್ವದ ಕಿಂಗ್‌ಫಿಶರ್ (Kingfisher) ಮತ್ತು ತಾನು ಬಾಕಿ ಉಳಿಸಿಕೊಂಡಿರುವ ಸಾಲದ ಮಾಹಿತಿ ನೀಡುವಂತೆ ಕೋರಿ ಸಲ್ಲಿಸಿರುವ ಅರ್ಜಿ ವಿಚಾರಣೆ ಕರ್ನಾಟಕ ಹೈಕೋರ್ಟಿನಲ್ಲಿ (High Court) ನಡೀತು.
ಮಲ್ಯ ಕಡೆಯಿಂದ 10,000 ಕೋಟಿ ರೂಪಾಯಿಯನ್ನು ಜಫ್ತಿ ಮಾಡಲಾಗಿದೆ. ಸದನದಲ್ಲಿ ಕೇಂದ್ರ ಹಣಕಾಸು ಸಚಿವರು 14,000 ಕೋಟಿ ರೂಪಾಯಿ ಜಫ್ತಿ ಮಾಡಲಾಗಿದೆ ಎಂದು ವಿಜಯ್ ಮಲ್ಯ ಪರ ಹಿರಿಯ ವಕೀಲ ಸಜನ್ ಪೂವಯ್ಯ ಹೇಳಿದ್ರು.
ಬ್ಯಾಂಕ್‌ಗಳ ಒಕ್ಕೂಟ ಬಾಕಿ ಇರುವುದಕ್ಕಿಂತ ಹೆಚ್ಚಿನ ಹಣವನ್ನು ಜಫ್ತಿ ಮಾಡಿದೆ ಎಂದು ಅಧಿಕೃತ ಲಿಕ್ವಿಡೇಟರ್ ಹೇಳಿದ್ದಾರೆ. ಕೇಂದ್ರ ಹಣಕಾಸು ಸಚಿವರು ಸದನದಲ್ಲಿ 14,000 ಕೋಟಿ ರೂಪಾಯಿ ಜಫ್ತಿ ಮಾಡಲಾಗಿದೆ ಎಂದು ಹೇಳಿದ್ದಾರೆ. ಆದರೆ ಬ್ಯಾಂಕ್‌ಗಳು ಹಣ ಪಡೆದಿಲ್ಲ ಎಂದು ಆಕ್ಷೇಪಣೆಯಲ್ಲಿ ಹೇಳಿವೆ. ವಿಜಯ್ ಮಲ್ಯ ಪರವಾಗಿ ನಾನು ಕ್ಷಮೆ ಕೋರುತ್ತಿಲ್ಲ. ಆದರೆ, ಬ್ಯಾಂಕ್‌ಗಳು ಖಾತೆಯ ವಿವರವನ್ನು ಬಹಿರಂಗಪಡಿಸಬೇಕು ಎಂದು ವಿಜಯ್ ಮಲ್ಯ ಪರ ಹಿರಿಯ ವಕೀಲ ಸಜನ್ ಪೂವಯ್ಯ ಆಗ್ರಹಿಸಿದ್ರು.
ಮಲ್ಯರನ್ನು ದೇಶಭ್ರಷ್ಟ ಎಂದು ಘೋಷಿಸಲಾಗಿದೆ. ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಇರುವ ಯಾವುದೇ ಪ್ರಕ್ರಿಯೆಯಲ್ಲಿ ಭಾಗವಹಿಸಿಲ್ಲ. ಸ್ವಚ್ಛವಾಗಿ ಮಲ್ಯ ನ್ಯಾಯಾಲಯದ ಮುಂದೆ ಬಂದಿಲ್ಲ. ತನಗೆ ಬೇಕಾದಾಗ ಮತ್ತು ತನಗೆ ಅಗತ್ಯ ಎನಿಸಿದಾಗ ಅವರು ನ್ಯಾಯಾಲಯದ ಮುಂದೆ ಬಂದಿದ್ದಾರೆ ಎಂದು ಬ್ಯಾಂಕ್‌ಗಳ ಪರ ವಕೀಲ ವಿಕ್ರಂ ಹುಯಿಲಗೋಳ ಹೇಳಿದರು.
ಇಂದಿಗೂ ಅವರಿಂದ ಜಫ್ತಿ ಮಾಡಿಕೊಂಡಿರುವುದನ್ನು ತಾತ್ಕಾಲಿಕ ಎಂದು ಏಕೆ ಹೇಳಲಾಗುತ್ತಿದೆ ಎಂದರೆ ಅವರು ಭಾರತದ ವ್ಯಾಪ್ತಿಗೆ ಬರುತ್ತಿಲ್ಲ. ಮಲ್ಯ ಮುಗ್ಧರಾದರೆ ಭಾರತಕ್ಕೆ ಮರಳಬೇಕು. ಮಲ್ಯರನ್ನು ತನ್ನ ಮುಂದೆ ಬಂದು ನಿಲ್ಲುವಂತೆ ಮಾಡಲು ಸುಪ್ರೀಂ ಕೋರ್ಟ್‌ಗೂ ಸಾಧ್ಯವಾಗಿಲ್ಲ. ಮಲ್ಯ ನಡತೆಯನ್ನು ಪರಿಶೀಲಿಸಿ ಅವರಿಗೆ ಯಾವುದೇ ಪರಿಹಾರ ನೀಡಬಾರದು. ಮಲ್ಯ ವಿರುದ್ಧ ಹಲವು ಅಕ್ರಮ ಹಣ ವರ್ಗಾವಣೆ ಪ್ರಕ್ರಿಯೆ ಮತ್ತು ಆಸ್ತಿ ಜಫ್ತಿ ಪ್ರಕ್ರಿಯೆ ನಡೆಯುತ್ತಿವೆ ಎಂದು ಬ್ಯಾಂಕ್‌ಗಳ ಪರ ವಕೀಲ ವಿಕ್ರಂ ಹುಯಿಲಗೋಳ ಹೇಳಿದರು.
ಕಳೆದ 10 ರಿಂ ದ 15 ವರ್ಷಗಳಲ್ಲಿ ನಡೆದಿರುವುದನ್ನು ನೋಡಿದರೆ ಅರ್ಜಿದಾರರು ಹೇಳುವಂತೆ ಯಾವುದೂ ಅಷ್ಟು ಸರಳವಾಗಿಲ್ಲ. ಬ್ಯಾಂಕ್‌ಗಳು ಶಾಸನಕ್ಕೆ ಬದ್ಧವಾಗಿವೆ. ಹೀಗಾಗಿ ಮಲ್ಯ ಅರ್ಜಿಯನ್ನೂ ಸೇರಿ ಎರಡೂ ಅರ್ಜಿಗಳನ್ನು ವಜಾಗೊಳಿಸಬೇಕು ಎಂದು ಬ್ಯಾಂಕ್‌ಗಳ ಪರ ವಕೀಲ ವಿಕ್ರಂ ಹುಯಿಲಗೋಳ ಹೇಳಿದರು.
ದಲ್ಜಿತ್ ವಿರುದ್ಧ ಯಾವುದೇ ಪ್ರಕ್ರಿಯೆಗಳು ನಡೆಯುತ್ತಿಲ್ಲ ಎಂದು ಯುನೈಟೆಡ್ ಬ್ರೀವರೀಸ್ ಹೋಲ್ಡಿಂಗ್ಸ್ ಲಿಮಿಟೆಡ್ ನಿರ್ದೇಶಕ ದಲ್ಜಿತ್ ಮಹಲ್ ಪರ ವಕೀಲ ಸಜನ್ ಪೂವಯ್ಯ ಹೇಳಿದರು.
ಇದನ್ನೂ ಓದಿ: ಪೋಕ್ಸೊ ಕಾಯ್ದೆ ದುರುಪಯೋಗಕ್ಕೆ ಸುಪ್ರೀಂ ಕಳವಳ, ಅರಿವು ಮೂಡಿಸುವುದು ಅಗತ್ಯವೆಂದ ಕೋರ್ಟ್
ಜಫ್ತಿ ಮಾಡಿರುವ ಹಣಕ್ಕೆ ಬ್ಯಾಂಕ್‌ಗಳು ಹೇಗೆ ಬಡ್ಡಿ ವಿಧಿಸಲು ಸಾಧ್ಯ. ಬಾಕಿ ಇರುವ ಪ್ರಕರಣದಲ್ಲಿ ಅಸಲು ಮತ್ತು ಬಡ್ಡಿ ವಸೂಲು ಮಾಡಲಾಗದು. ಯುಬಿಎಚ್‌ಎಲ್‌ನ ಮಾಜಿ ನಿರ್ದೇಶಕನಾಗಿರುವುದರಿಂದ ಈ ಅರ್ಜಿ ಊರ್ಜಿತವಾಗಲಿದೆ. ಮಲ್ಯ ತನ್ನ ಇಷ್ಟವಾದ ಪ್ರಕ್ರಿಯೆಯಲ್ಲಿ ಭಾಗವಹಿಸಬಹುದು ಎಂದು ಹೇಳುತ್ತಿಲ್ಲ. ದೇಶಭ್ರಷ್ಟರ ಕಾಯಿದೆ ಅಡಿ ಈ ಅರ್ಜಿ ಸಲ್ಲಿಸಿರುವುದೇಕೆ ಎಂದರೆ ದೇಶಭ್ರಷ್ಟ ಎಂದು ಘೋಷಿಸಿದರೆ ಯಾವುದೇ ಸಿವಿಲ್ ಪ್ರಕ್ರಿಯೆ ಮುಂದುವರಿಸಲಾಗದು. ಆದರೆ ರಿಟ್ ಪರಿಹಾರವನ್ನು ನಿರ್ಬಂಧಿಸಲಾಗಿಲ್ಲ ಎಂದು ವಕೀಲ ಸಜನ್ ಪೂವಯ್ಯ ಹೇಳಿದರು.
ಮಲ್ಯ ಕಾನೂನು ಪ್ರಕ್ರಿಯೆ ಎದುರಿಸದಿದ್ದರೆ ಅದು ಅಂತಿಮಗೊಳ್ಳಲ್ಲ. ಅದಾಗ್ಯೂ, ಈ ಪರಿಹಾರ ಹೇಗೆ ಕೇಳುತ್ತಿರುವಿರಿ?’ ಎಂದು ಪೀಠ ಪ್ರಶ್ನೆ ಮಾಡಿತು. ಒಂದೊಮ್ಮೆ ದೋಷಿ ಎಂದು ತೀರ್ಮಾನವಾದರೆ ಆಸ್ತಿಯು ಕೇಂದ್ರ ಸರ್ಕಾರದ ಬಳಿ ಇರಲಿದೆ. ವಿಚಾರಣೆ ಮುಗಿಯುವವರೆಗೆ ಬಡ್ಡಿ ಪಡೆಯುವುದನ್ನು ನಿಲ್ಲಸಲಾಗದು. 6000 ಕೋಟಿ ರೂಪಾಯಿಗೆ 12,000 ಕೋಟಿ ರೂಪಾಯಿ ವಸೂಲಿ ಮಾಡಲಾಗಿದೆ ಎಂದು ಪೂವಯ್ಯ ಕಿಡಿಕಾರಿದರು.
ಕಂಪನಿಯ ಎಲ್ಲಾ ನಿರ್ದೇಶಕರ ವಿರುದ್ಧ ಬಾಕಿ ಇರುವ ಪ್ರಕ್ರಿಯೆ ವಿವರಣೆ ಮತ್ತು ಆಕ್ಷೇಪಣೆ ಸಲ್ಲಿಸಲಾಗುವುದು ಎಂದು ಅಧಿಕೃತ ಲಿಕ್ವಿಡೇಟರ್ ಪರ ವಕೀಲರು ಹೇಳಿದರು.
ಅಧಿಕೃತ ಲಿಕ್ವಿಡೇಟರ್ ನವೆಂಬರ್ 10 ರೊಳಗೆ ಆಕ್ಷೇಪಣೆ ಸಲ್ಲಿಸಬೇಕು. ಅದರ ಪ್ರತಿಯನ್ನು ಅರ್ಜಿದಾರರಿಗೆ ಸಲ್ಲಿಸಬೇಕು ಎಂದು ಆದೇಶಿಸಿದ ಪೀಠ. ವಿಚಾರಣೆಯನ್ನು ನವೆಂಬರ್ 12 ಕ್ಕೆ ಮುಂದೂಡಿದೆ.