ಬೆಂಗಳೂರು: ವಸತಿ ಸಚಿವ ವಿ.ಸೋಮಣ್ಣ ಸೋಮವಾರ ಪತ್ರಿಕಾಗೋಷ್ಠಿ ನಡೆಸಿ ತಮ್ಮ ರಾಜಕೀಯ ಶತ್ರುಗಳಾದ ಕಾಂಗ್ರೆಸ್ ಪಕ್ಷದ ಪ್ರಿಯಾಕೃಷ್ಣ ಹಾಗೂ ಎ.ಕೃಷ್ಣಪ್ಪ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ನನ್ನ ಬಗ್ಗೆ ಮಾತಾಡಲು ಪ್ರಿಯಾಕೃಷ್ಣಗೆ ಏನು ಯೋಗ್ಯತೆಯಿದೆ. ನಾನು ಮಾಡಿರುವ ಅಭಿವೃದ್ಧಿ ಕಾರ್ಯಗಳೇ ನನಗೆ ಶ್ರೀರಕ್ಷೆಯಾಗಿದೆ. 10 ವರ್ಷಗಳ ಕಾಲ ಪ್ರಿಯಾಕೃಷ್ಣ, 15 ವರ್ಷಗಳ ಕಾಲ ಅವರ ತಂದೆ ಕೃಷ್ಣಪ್ಪ ಶಾಸಕರಾಗಿದ್ದರು. ಆ ಸಮಯದಲ್ಲಿ ಮಾಡಿದ ಸಾಧನೆಯಾದರೂ ಏನು ಎಂದು ಕಿಡಿಕಾರಿದ್ದಾರೆ.
ಯಡಿಯೂರಪ್ಪನವರಿಗೆ ನೀವು ಚುನಾವಣೆ ಸ್ಪರ್ಧೆಯ ಬಗ್ಗೆ ಮಾತು ಕೊಟ್ಟಿದ್ದೀರಾ ಎಂಬ ಪ್ರಶ್ನೆಗೆ ಸಿಡಿಮಿಡಿಗೊಂಡ ವಿ.ಸೋಮಣ್ಣ ನನಗೆ ಅದರ ಬಗ್ಗೆ ಏನೂ ಗೊತ್ತಿಲ್ಲ. ಯಾರು ಮಾತು ಕೊಟ್ಟಿದ್ದಾರೋ ಅವರ ಬಳಿ ಕೇಳಿ ಎಂದಿದ್ದಾರೆ.
ಗೋವಿಂದರಾಜ ನಗರದಿಂದ ಸ್ಪರ್ಧಿಸುತ್ತಿದ್ದೀರಾ ಎಂಬ ಪ್ರಶ್ನೆಗೆ ನನಗೆ ಇಲ್ಲಿಂದಲೇ ಸ್ಪರ್ಧಿಸಬೇಕೆಂಬ ಯಾವ ಆಕಾಂಕ್ಷೆಯೂ ಇಲ್ಲ. ಒಳ್ಳೆಯ ಕೆಲಸ ಎಲ್ಲಾದರೂ ಮಾಡಬಲ್ಲೆ. ನಾನು ಯಾವ ಕ್ಷೇತ್ರದಿಂದ ಟಿಕೆಟ್ ಕೇಳಿದರೂ ಹೈಕಮ್ಯಾಂಡ್ ಇಲ್ಲವೆನ್ನುವುದಿಲ್ಲ. ಹೈಕಮ್ಯಾಂಡ್ ಹೇಗೆ ಹೇಳುತ್ತದೆಯೋ ಅದರಂತೆ ನಡೆಯುತ್ತೇನೆ ಎಂದಿದ್ದಾರೆ.