ದಕ್ಷಿಣ ಕನ್ನಡ : ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ರಾಷ್ಟ್ರೀಯ ಆರೋಗ್ಯ ಅಭಿಯಾನದ (NHM) ಅಡಿಯಲ್ಲಿ ಸೇವೆ ಸಲ್ಲಿಸುತ್ತಿರುವ ಗುತ್ತಿಗೆ ನೌಕರರನ್ನು (Contract employees) ಯಾವುದೇ ಕಾರಣಕ್ಕೂ ಖಾಯಂ ಮಾಡಲು ಕಾನೂನಾತ್ಮಕವಾಗಿ ಸಾಧ್ಯವಿಲ್ಲ ಎಂದು ಆರೋಗ್ಯ ಸಚಿವರಾದ ಯು. ಟಿ. ಖಾದರ್ (UT Khadar) ಅವರು ಸ್ಪಷ್ಟಪಡಿಸಿದ್ದಾರೆ. ಸರ್ಕಾರದ ಈ ನಿರ್ಧಾರದಿಂದಾಗಿ ವರ್ಷಗಳಿಂದ ಕಾಯಂ ಉದ್ಯೋಗದ ನಿರೀಕ್ಷೆಯಲ್ಲಿದ್ದ ಸಾವಿರಾರು ಗುತ್ತಿಗೆ ಸಿಬ್ಬಂದಿಗೆ ತೀವ್ರ ನಿರಾಶೆಯಾಗಿದೆ. ಇಲಾಖೆಯ ನಿಯಮಾವಳಿಗಳು ಹಾಗೂ ಪ್ರಸ್ತುತ ಇರುವ ತಾಂತ್ರಿಕ ಮತ್ತು ಆರ್ಥಿಕ ಚೌಕಟ್ಟುಗಳು ಈ ರೀತಿಯ ನೇರ ಕಾಯಂಗೊಳಿಸುವಿಕೆಗೆ ಅನುಮತಿ ನೀಡುವುದಿಲ್ಲ ಎಂದು ಅವರು ತಿಳಿಸಿದ್ದಾರೆ.
ಈ ಕುರಿತು ಉನ್ನತ ಮಟ್ಟದ ಸಭೆಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ಗುತ್ತಿಗೆ ಆಧಾರದ ಮೇಲೆ ನೇಮಕಗೊಂಡಿರುವ ನೌಕರರನ್ನು ನೇರವಾಗಿ ಕಾಯಂ ನೌಕರರನ್ನಾಗಿ ಪರಿವರ್ತಿಸಲು ಪ್ರಸ್ತುತ ಇಲಾಖೆಯ ಸೇವಾ ನಿಯಮಗಳಲ್ಲಿ ಅವಕಾಶವಿಲ್ಲ. ಒಂದು ವೇಳೆ ಇವರನ್ನು ಕಾಯಂ ಮಾಡಬೇಕಾದರೆ ಸರ್ಕಾರದ ಹಂತದಲ್ಲಿ ದೊಡ್ಡ ಮಟ್ಟದ ನೀತಿ ಬದಲಾವಣೆಗಳಾಗಬೇಕು ಮತ್ತು ಹೊಸ ನಿಯಮಗಳನ್ನು ರೂಪಿಸಬೇಕಾಗುತ್ತದೆ, ಆದರೆ ಸದ್ಯದ ಪರಿಸ್ಥಿತಿಯಲ್ಲಿ ಇದು ಪ್ರಾಯೋಗಿಕವಾಗಿ ಅಸಾಧ್ಯದ ಮಾತು ಎಂದು ಇಲಾಖೆಯ ಅಸಹಾಯಕತೆಯನ್ನು ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ : ಆರೋಗ್ಯ ಇಲಾಖೆ ಅಸ್ವಸ್ಥತೆಗೆ ಮದ್ದು – ಶೀಘ್ರದಲ್ಲೇ 200 ವೈದ್ಯರ ನೇರ ನೇಮಕ!
ಇದೇ ವೇಳೆ ನೌಕರರ ಹಿತರಕ್ಷಣೆಯ ಬಗ್ಗೆ ಮಾತನಾಡಿದ ಅವರು, ಕಾಯಂ ಪ್ರಕ್ರಿಯೆ ಸಾಧ್ಯವಿಲ್ಲದಿದ್ದರೂ ಸಹ ಪ್ರಸ್ತುತ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿಯ ಹಿತಾಸಕ್ತಿಯನ್ನು ಕಾಯಲು ಸರ್ಕಾರ ಬದ್ಧವಾಗಿದೆ ಎಂದಿದ್ದಾರೆ. ಗುತ್ತಿಗೆ ನೌಕರರ ಸೇವಾ ಭದ್ರತೆ, ಗೌರವ ಧನ ಹೆಚ್ಚಳ ಹಾಗೂ ಇತರೆ ಸೌಲಭ್ಯಗಳ ಸುಧಾರಣೆಗೆ ಸಂಬಂಧಿಸಿದಂತೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು. ಆದರೆ ಖಾಯಂ ಉದ್ಯೋಗದ ಬೇಡಿಕೆಯನ್ನು ಈಡೇರಿಸಲು ಇರುವ ತಾಂತ್ರಿಕ ಅಡಚಣೆಗಳನ್ನು ನೌಕರರು ಅರ್ಥಮಾಡಿಕೊಳ್ಳಬೇಕು ಎಂದು ಅವರು ಮನವಿ ಮಾಡಿದ್ದಾರೆ.